ನವದೆಹಲಿ: ವಿಚಾರವಾದಿ, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಆರ್ ಎಸ್ ಎಸ್ ಕೈವಾಡವಿದೆ ಎಂದು ಆರೋಪಿಸಿದ್ದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಮತ್ತು ಸಿಪಿಎಂ ಧುರೀಣ ಸೀತಾರಾಂ ಯಚೂರಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿದೆ.
ಆರ್ ಎಸ್ಎಸ್ ಕಾರ್ಯಕರ್ತ, ನ್ಯಾಯವಾದಿ ಧ್ರಿತುಮಾನ್ ಜೋಶಿ ಇಬ್ಬರು ನಾಯಕರ ವಿರುದ್ಧ ಮುಂಬೈನ ಸ್ಥಳೀಯ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ವಿಚಾರವಾಗಿ ಅ. 22 ರಂದು ವಿಚಾರಣೆ ನಡೆಯುವ ಸಾಧ್ಯತೆಯಿದೆ.
ಇವರಲ್ಲದೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಸಿಪಿಎಂ ಪಕ್ಷವನ್ನೂ ಇತರ ಆರೋಪಿಗಳಾಗಿ ಪರಿಗಣಿಸಬೇಕು ಎಂದು ದೂರಿನಲ್ಲಿ ಕೋರಲಾಗಿದೆ. ಗೌರಿ ಲಂಕೇಶ್ ಹತ್ಯೆಯಾದ ಮರುದಿನವೇ ರಾಹುಲ್ ಗಾಂಧಿ ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವಾಗ ಆರ್ ಎಸ್ಎಸ್ ಸಂಘಟನೆ ಮೇಲೆ ನೇರ ಆರೋಪ ಮಾಡಿದ್ದರು. ಯಾವುದೇ ಸಾಕ್ಷ್ಯವಿಲ್ಲದೆ, ಆರ್ ಎಸ್ಎಸ್ ಮೇಲೆ ಆರೋಪ ಮಾಡಿದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.