ಇಂದು ರೈತರಿಂದ ದೆಹಲಿ ಚಲೋ ಪ್ರತಿಭಟನೆ: ಕಾರಣವೇನು ನೋಡಿ

Krishnaveni K

ಮಂಗಳವಾರ, 13 ಫೆಬ್ರವರಿ 2024 (10:14 IST)
Photo Courtesy: Twitter
ನವದೆಹಲಿ: ವಿವಿಧ ಬೇಡಿಕೆಗಳ ಈಡೇರಿಕೆ ಆಗ್ರಹಿಸಿ ರೈತರು ದೆಹಲಿ ಚಲೋ ಪ್ರತಿಭಟನೆ ನಡೆಸುತ್ತಿದ್ದು, ಇಂದು ದೆಹಲಿಗೆ ತಲುಪಲಿದ್ದಾರೆ.

ರೈತರ ದೆಹಲಿ ಚಲೋ ಹೋರಾಟದಲ್ಲಿ ಯಾವುದೇ ಅಹಿತಕರ ಘಟನೆಗಳಾಗದಂತೆ ಪೊಲೀಸರು ತಡೆಗೋಡೆಗಳನ್ನು ನಿರ್ಮಿಸಿ ಮೊದಲೇ ಎಚ್ಚರಿಕೆ ವಹಿಸಿದ್ದಾರೆ. ಕೇಂದ್ರ ಸರ್ಕಾರದ ನೀತಿ ವಿರೋಧಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಈ ಹಿಂದೆ ನಡೆದಂತೆ ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಸರ್ಕಾರ ಎಚ್ಚರಿಕೆ ವಹಿಸಿದೆ.

ರೈತರ ಹೋರಾಟಕ್ಕೆ ಕಾರಣವೇನು?
ಸಂಯುಕ್ತ ಕಿಸಾನ್ ಮೊರ್ಚಾ ಮತ್ತು ಕಿಸಾನ್ ಮಜ್ದೂರ್ ಮೋರ್ಚಾ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದ್ದು, ಇದಕ್ಕೆ 200 ಕ್ಕೂ ಹೆಚ್ಚು ರೈತ ಸಂಘಟನೆಗಳು ಬೆಂಬಲ ನೀಡಿವೆ. ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನಿಗದಿ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಕಾನೂನು ಜಾರಿ ಮಾಡಬೇಕು. ರೈತರಿಗೆ, ಕೂಲಿ ಕಾರ್ಮಿಕರಿಗೆ ಪಿಂಚಣಿ ನೀಡಲು ಸ್ವಾಮಿನಾಥನ್ ಆಯೋಗ ಶಿಫಾರಸ್ಸು ಜಾರಿ ಮಾಡಬೇಕು. ಲಖೀಂಪುರಖೇರಿ ಹಿಂಸಾಚಾರದಲ್ಲಿ ನೊಂದ ಕುಟುಂಬದವರಿಗೆ ನ್ಯಾಯ ನೀಡಬೇಕು ಎಂಬ ಬೇಡಿಕೆಗಳನ್ನಿಟ್ಟುಕೊಂಡು ಹೋರಾಟ ನಡೆಸಲಾಗುತ್ತಿದೆ.

ಕರ್ನಾಟಕದಿಂದಲೂ ರೈತರು ಭಾಗಿ
ದೆಹಲಿ ಚಲೋ ರೈತ ಹೋರಾಟಕ್ಕೆ ರಾಜ್ಯದಿಂದಲೂ ರೈತರು ಕೈ ಜೋಡಿಸಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿಯತ್ತ ರೈಲು ಮಾರ್ಗವಾಗಿ ತೆರಳುತ್ತಿದ್ದ 73 ರೈತರನ್ನು ಬಂಧಿಸಲಾಗಿದೆ. ಭೋಪಾಲ್ ರೈಲ್ವೇ ನಿಲ್ದಾಣದಲ್ಲಿ ರಾಜ್ಯದ ರೈತರನ್ನು ವಶಕ್ಕೆ ಪಡೆಯಲಾಗಿದೆ. ಇದನ್ನು ಸಿಎಂ ಸಿದ್ದರಾಮಯ್ಯ ಖಂಡಿಸಿದ್ದಾರೆ.

2020-21 ರಲ್ಲಿ ದೆಹಲಿಯಲ್ಲಿ ಅತೀ ದೊಡ್ಡ ಪ್ರತಿಭಟನೆ ನಡೆದಿತ್ತು. ಅದಾದ ಬಳಿಕ ಇದೇ ಮೊದಲ ಬಾರಿಗೆ ರೈತರಿಂದ ದೆಹಲಿಯಲ್ಲಿ ಪ್ರತಿಭಟನೆ ನಡೆಯುತ್ತಿದೆ. ಅಂದು ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿತ್ತು. ಕೆಂಪುಕೋಟೆಯಲ್ಲಿ ರಾಷ್ಟ್ರಧ್ವಜ ಕೆಳಗಿಳಿಸಿದ್ದು ವಿವಾದಕ್ಕೆ ಕಾರಣವಾಗಿತ್ತು. ಇಂದು ಮತ್ತೆ ಅಂತಹ ದುರ್ಘಟನೆ ಸಂಭವಿಸಿದಂತೆ ಪೊಲೀಸರು ತಡೆಗೋಡೆ ನಿರ್ಮಿಸಿ ಕಟ್ಟೆಚ್ಚರ ವಹಿಸಿದ್ದಾರೆ. ಜೊತೆಗೆ ರೈತರು ದಿಲ್ಲಿ ಪ್ರವೇಶಿಸದಂತೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಪ್ರತಿಭಟನಾಕಾರರು ಪೆಟ್ರೋಲ್, ಸೋಡಾ ಬಾಟಲ್ ಒಯ್ಯದಂತೆ ನಿಷೇಧ ಹೇರಲಾಗಿದೆ. ಅಲ್ಲದೆ ದೆಹಲಿಯಲ್ಲಿ ಇಂಟರ್ ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ. ಸಾರ್ವಜನಿಕರ ಆಸ್ತಿಪಾಸ್ತಿಗೆ ಹಾನಿಯಾದರೆ ಹೋರಾಟಗಾರರೇ ತುಂಬಿಕೊಡಬೇಕಾಗುತ್ತದೆ ಎಂದು ಹರ್ಯಾಣ ಸರ್ಕಾರ ಎಚ್ಚರಿಕೆ ನೀಡಿದೆ. ಹೀಗಾಗಿ ಇಂದಿನ ರೈತರ ದೆಹಲಿ ಮುತ್ತಿಗೆ ಯೋಜನೆಗೆ ಅಡ್ಡಿ ಎದುರಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ