ದೆಹಲಿಯಲ್ಲಿ ಇಂದು ಕಾಂಗ್ರೆಸ್ ದಿಲ್ಲಿ ಚಲೋ ಪ್ರತಿಭಟನೆ

Krishnaveni K

ಬುಧವಾರ, 7 ಫೆಬ್ರವರಿ 2024 (08:49 IST)
Photo Courtesy: Twitter
ನವದೆಹಲಿ: ಕೇಂದ್ರ ತೆರಿಗೆ ಹಂಚಿಕೆ ವಿಚಾರದಲ್ಲಿ ತಾರತಮ್ಯ ಮಾಡುತ್ತಿದೆ ಎಂದು ಆರೋಪಿಸಿ ಇಂದು ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕರ್ನಾಟಕ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸಲಿದ್ದಾರೆ.

ದಕ್ಷಿಣ ಭಾರತದಿಂದ ಅತೀ ಹೆಚ್ಚು ತೆರಿಗೆ ಸಂಗ್ರಹವಾಗುತ್ತಿದ್ದರೂ ಈ ರಾಜ್ಯಗಳಿಗೆ ಹಂಚಿಕೆ ಮಾಡುವಾಗ ಮಾತ್ರ ಕೇಂದ್ರ ಅನ‍್ಯಾಯ ಮಾಡುತ್ತಿದೆ. ನಮ್ಮ ತೆರಿಗೆ ಹಣವನ್ನು ನಮಗೇ ಕೊಡದೇ ವಂಚಿಸುತ್ತಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದೆ. ಇತ್ತೀಚೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ್ದ ಮಧ‍್ಯಂತರ ಬಜೆಟ್ ನಲ್ಲಿ ಕರ್ನಾಟಕದ ಯಾವ ಯೋಜನೆಗಳಿಗೂ ಹಣ ನೀಡಲಾಗಿಲ್ಲ ಎಂದು ಕಾಂಗ್ರೆಸ್ ಆರೋಪ ಮಾಡಿದೆ.

ಇಂದು ದೆಹಲಿಯಲ್ಲಿ ಪ್ರತಿಭಟನೆ
ಇಂದು ದೆಹಲಿಯ ಜಂತರ್ ಮಂತರ್ ನಲ್ಲಿ ಬೆಳಿಗ್ಗೆ 11 ಗಂಟೆಗೆ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಶಾಸಕರು, ಸಂಸದರು ಸೇರಿದಂತೆ ನಾಯಕರು ಪ್ರತಿಭಟನೆ ನಡೆಸಲಿದ್ದಾರೆ. ಇದಕ್ಕೆ ದಿಲ್ಲಿ ಚಲೋ ಎಂದು ನಾಮಕರಣ ಮಾಡಲಾಗಿದೆ. ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಬಿಜೆಪಿ ಸಂಸದರಿಗೂ ಸಿದ್ದರಾಮಯ್ಯ ಕರೆ ಕೊಟ್ಟಿದ್ದಾರೆ. ಆದರೆ ಬಿಜೆಪಿ ನಾಯಕರು ಈ ಪ್ರತಿಭಟನೆಗೆ ಬೆಂಬಲ ನೀಡುತ್ತಿಲ್ಲ.

ಕಾಂಗ್ರೆಸ್ ತನ್ನ ದಿವಾಳಿತನ ಮುಚ್ಚಿಡಲು ಈ ನಾಟಕ ಮಾಡುತ್ತಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಇಂದು ಕರ್ನಾಟಕ ಸಿಎಂ ನೇತೃತ್ವದಲ್ಲಿ ಪ್ರತಿಭಟನೆ ನಡೆದರೆ ನಾಳೆ ಕೇರಳ ಸಿಎಂ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ಇದೇ ವಿಚಾರಕ್ಕೆ ಪ್ರತಿಭಟನೆ ನಡೆಯಲಿದೆ. ಈ ಮೂಲಕ ಇಂಡಿಯಾ ಒಕ್ಕೂಟದ ಮಿತ್ರ ಪಕ್ಷಗಳು ಕೇಂದ್ರದ ವಿರುದ್ಧ ತೆರಿಗೆ ತಾರತಮ್ಯ ಅಸ್ತ್ರ ಬಳಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ