ರಾಹುಲ್‌ಗಾಂಧಿ ಸಾಮಾನ್ಯ ಪಾಸ್‌ಪೋರ್ಟ್‌ ಬಳಸಲು ದೆಹಲಿ ಕೋರ್ಟ್ ಅನುಮತಿ

ಭಾನುವಾರ, 28 ಮೇ 2023 (12:33 IST)
ನವದೆಹಲಿ : ಸಂಸತ್ ಸದಸ್ಯತ್ವದಿಂದ ಅನರ್ಹಗೊಂಡ ನಂತರ ಸಂಸದೀಯ ಸವಲತ್ತುಗಳನ್ನೂ ಕಳೆದುಕೊಂಡ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ 3 ವರ್ಷ ಸಾಮಾನ್ಯ ಪಾಸ್ಪೋರ್ಟ್ ಬಳಸಲು ದೆಹಲಿ ಕೋರ್ಟ್ ಶುಕ್ರವಾರ ಅನುಮತಿ ನೀಡಿದೆ.
 
ಸಂಸದ ಸ್ಥಾನದಿಂದ ಅನರ್ಹಗೊಂಡ ನಂತರ ರಾಹುಲ್ಗಾಂಧಿ ತಮ್ಮ ಪಾಸ್ಪೋರ್ಸ್ ಅನ್ನು ಒಪ್ಪಿಸಿದ್ದರು. ನಂತರ ಗಾಂಧಿ ಅವರು ನಿರಾಕ್ಷೇಪಣಾ ಪ್ರಮಾಣಪತ್ರಕ್ಕಾಗಿ ಕೋರ್ಟ್ ಸಂಪರ್ಕಿಸಿದ್ದರು. ಈ ಕುರಿತು ವಿಚಾರಣೆ ನಡೆಸಿದಾಗ ಅರ್ಜಿಯನ್ನು ಭಾಗಶಃ ಅನುಮತಿಸುವುದಾಗಿ ಕೋರ್ಟ್ ಹೇಳಿದೆ. ಆದ್ರೆ 10 ವರ್ಷಗಳು ಇರುವುದಿಲ್ಲ, ಕೇವಲ 3 ವರ್ಷಗಳ ಕಾಲ ಸಾಮಾನ್ಯ ಪಾಸ್ಪೋರ್ಟ್ ಬಳಸಬಹುದಾಗಿ ತಿಳಿಸಿದೆ.

ರಾಹುಲ್ ಗಾಂಧಿ ಅವರು ಪಾಸ್ ಪೋರ್ಟ್ ಹೊಂದಲು ನ್ಯಾಯಾಲಯದ ಅನುಮತಿ ಬೇಕಿತ್ತು. ಏಕೆಂದರೆ ಅವರು ನ್ಯಾಷನಲ್ ಹೆರಾಲ್ಡ್ ಪ್ರಕರಣದ ಆರೋಪಿಯಾಗಿದ್ದಾರೆ. ಅಕ್ರಮ ಹಣ ವರ್ಗಾವಣೆ ಪ್ರಕರಣ ಹಾಗೂ ಹಣಕಾಸು ದುರ್ಬಳಕೆ ಆರೋಪಗಳು ಅವರ ಮೇಲಿದೆ. ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ರಾಹುಲ್ ಗಾಂಧಿ ವಿರುದ್ಧ ಪ್ರಕರಣ ದಾಖಲಿಸಿದ್ದರು. 

ರಾಹುಲ್ ಗಾಂಧಿ ಅವರು ಪಾಸ್ ಪೋರ್ಟ್ ಹೊಂದಲು ನ್ಯಾಯಾಲಯದಿಂದ ನಿರಪೇಕ್ಷಣಾ ಪತ್ರ ಕೋರಿದ್ದ ಹಿನ್ನೆಲೆಯಲ್ಲಿ ನ್ಯಾಯಾಲಯವು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರಿಗೆ ತಮ್ಮ ಪ್ರತಿಕ್ರಿಯೆ ಸಲ್ಲಿಸುವಂತೆ ಕಳೆದ ಬುಧವಾರ ಸೂಚಿಸಿತ್ತು.

ಶುಕ್ರವಾರದ ಒಳಗೆ ತಮ್ಮ ಪ್ರತಿಕ್ರಿಯೆ ಸಲ್ಲಿಸುವಂತೆ ಸ್ವಾಮಿ ಅವರಿಗೆ ನ್ಯಾಯಾಲಯ ಡೆಡ್ ಲೈನ್ ನೀಡಿತ್ತು. ಶುಕ್ರವಾರದ ವಿಚಾರಣೆ ವೇಳೆ ಮೆಟ್ರೋಪಾಲಿಟನ್ ನ್ಯಾಯಾಲಯದ ಹೆಚ್ಚುವರಿ ಮುಖ್ಯ ನ್ಯಾಯಮೂರ್ತಿ ವೈಭವ್ ಮೆಹ್ತಾ ಅವರು ರಾಹುಲ್ ಗಾಂಧಿ ಅವರಿಗೆ ಪ್ರಯಾಣ ಮಾಡುವ ಮೂಲಭೂತ ಹಕ್ಕು ಇದೆ ಎಂದು ಅಭಿಪ್ರಾಯಪಟ್ಟರು. ಇದಕ್ಕೆ ನಾವು ನಿರ್ಬಂಧ ಹೇರಲು ಸಾಧ್ಯವಿಲ್ಲ ಎಂದು ಹೇಳಿದ ನ್ಯಾಯಮೂರ್ತಿಗಳು ವಿದೇಶಿ ಪ್ರವಾಸಕ್ಕೆ ಅನುಮತಿ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ