ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ಜಾರಿಯಲ್ಲಿದ್ದು, ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ವೃದ್ಧ ತಂದೆ,ತಾಯಿಯನ್ನು ವೀಲ್ ಚೇರ್ ನಲ್ಲಿ ಕರೆತಂದು ಮತ ಹಾಕಿಸಿದ್ದಾರೆ.
ಇಂದು ದೆಹಲಿ ವಿಧಾನಸಭೆಗೆ ಮತದಾನ ಪ್ರಕ್ರಿಯೆ ನಡೆಯುತ್ತಿದ್ದು ಮಧ್ಯಾಹ್ನದ ತನಕ ಶೇ.31 ರಷ್ಟು ಮತದಾನ ನಡೆದಿದೆ ಎಂದು ತಿಳಿದುಬಂದಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಸಹಿತ ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ.
ಎಎಪಿ ಮುಖ್ಯಸ್ಥ, ಮಾಜಿ ಸಿಎಂ ಅರವಿಂದ್ ಕೇಜ್ರಿವಾಲ್ ತಮ್ಮ ವಯೋವೃದ್ಧ ತಂದೆ ಗೋವಿಂದ್ ರಾಮ್ ಕೇಜ್ರಿವಾಲ್ ಮತ್ತು ಗೀತಾ ದೇವಿಯವರನ್ನು ವೀಲ್ ಚೇರ್ ನಲ್ಲಿ ಕರೆದುಕೊಂಡು ಫ್ಯಾಮಿಲಿ ಸಮೇತ ಮತಗಟ್ಟೆಗೆ ಬಂದಿದ್ದಾರೆ. ಪತ್ನಿಸುನಿತಾ, ಪುತ್ರನ ಜೊತೆಗೂಡಿ ಕೇಜ್ರಿವಾಲ್ ಮತ ಚಲಾಯಿಸಿದರು.
ಬಳಿಕ ಮಾತನಾಡಿದ ಸುನಿತಾ ಕೇಜ್ರಿವಾಲ್, ದೆಹಲಿ ಮತದಾರರು ಬುದ್ಧಿವಂತರಿದ್ದಾರೆ. ಅವರು ಗೂಂಡಾಗಿರಿ ರಾಜಕಾರಣವನ್ನು ಸಹಿಸಲ್ಲ. ಹೀಗಾಗಿ ಮತ್ತೆ ಎಎಪಿಯನ್ನು ಗೆಲ್ಲಿಸುತ್ತಾರೆ ಎಂಬ ನಂಬಿಕೆಯಿದೆ ಎಂದಿದ್ದಾರೆ.