ಬ್ಯಾಂಕ್‌, ಎಟಿಎಂಗಳಲ್ಲಿ ಸರದಿಗೆ ನಿಂತ ಜನರನ್ನು ಲೇವಡಿ ಮಾಡಿದ ಬಿಜೆಪಿ ಮುಖಂಡ

ಗುರುವಾರ, 5 ಜನವರಿ 2017 (14:25 IST)
ಬ್ಯಾಂಕ್ ಮತ್ತು ಎಟಿಎಂಗಳಲ್ಲಿ ಸರದಿಗಾಗಿ ನಿಂತ ಜನರನ್ನು ಲೇವಡಿ ಮಾಡಿದ ದೆಹಲಿ ಬಿಜೆಪಿ ಮುಖ್ಯಸ್ಥ ಮನೋಜ್ ತಿವಾರಿ ಕೂಡಲೇ ದೇಶದ ಜನತೆಯ ಕ್ಷಮೆಯಾಚಿಸಬೇಕು ಎಂದು ದೆಹಲಿಯ ಪ್ರವಾಸೋದ್ಯಮ ಮತ್ತು ಸಂಸ್ಕ್ರತಿ ಖಾತೆ ಸಚಿವರಾದ ಕಪಿಲ್ ಮಿಶ್ರಾ ಒತ್ತಾಯಿಸಿದ್ದಾರೆ.
 
ವಿಡಿಯೋವೊಂದರಲ್ಲಿ ಮನೋಜ್ ತಿವಾರಿ ಹಾಡು ಹಾಡುತ್ತಾ, ಬ್ಯಾಂಕ್ ಮತ್ತು ಎಟಿಎಂಗಳ ಮುಂದೆ ಸರದಿಗಾಗಿ ನಿಂತಿದ್ದ ಜನರನ್ನು ಲೇವಡಿ ಮಾಡಿದ್ದರು.
 
ನೋಟು ನಿಷೇಧದಿಂದಾಗಿ  ಬ್ಯಾಂಕ್ ಮತ್ತು ಎಟಿಎಂಗಳ ಮುಂದೆ ಸರದಿಗಾಗಿ ನಿಂತಿದ್ದ ಜನರನ್ನು ಲೇವಡಿ ಮಾಡಿ ದೇಶಭಕ್ತಿಯ ಹೆಸರಲ್ಲಿ ಜನರನ್ನು ಮೂರ್ಖರನ್ನಾಗಿ ಮಾಡುವುದು ಎಷ್ಟು ಸುಲಭ ಎಂದು ಬಿಜೆಪಿ ಮುಖಂಡ ಮನೋಜ್ ತಿವಾರಿ ನೀಡಿದ ಹೇಳಿಕೆಯ ವಿಡಿಯೋ ದೇಶಾದ್ಯಂತ ಜನತೆಯಲ್ಲಿ ಆಕ್ರೋಶ ಮೂಡಿಸಿದೆ.
 
ದೆಹಲಿ ವಿಧಾನಸಭೆಯ ವಿಪಕ್ಷ ನಾಯಕರಾದ ವಿಜೇಂದರ್ ಗುಪ್ತಾ ಸೇರಿದಂತೆ ಹಲವಾರು ನಾಯಕರು ತಿವಾರಿ ಅವರ ಲೇವಡಿಗೆ ಚಪ್ಪಾಳೆ ತಟ್ಟುತ್ತಾ ನಾಚಿಕೆಗೇಡಿಗಳಂತೆ ವರ್ತಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ಆಮ್ ಆದ್ಮಿ ಪಕ್ಷದ ಮುಖಂಡ, ಪ್ರವಾಸೋದ್ಯಮ ಖಾತೆ ಸಚಿವ ಕಪಿಲ್ ಮಿಶ್ರಾ ಟ್ವಿಟ್ ಮಾಡಿ ಸಹೋದರ ಬಿಜೆಪಿ ಮುಖಂಡ ಮನೋಜ್ ತಿವಾರಿ ನಿಮ್ಮ ವರ್ತನೆ ದೇಶದ ಜನತೆಗೆ ಅಗೌರವ ತರುವಂತಹದು, ನೋವು ತರುವಂತಹದು ಮತ್ತು ಅಸ್ವೀಕಾರಾರ್ಹವಾಗಿದೆ ಎಂದು ತಿರುಗೇಟು ನೀಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ