ಭೋಪಾಲ್ : ಯುವತಿಯೊಬ್ಬಳು ಲೈಂಗಿಕ ಕಿರುಕುಳ ಪ್ರಕರಣ ದಾಖಲಿಸಿದ ವಿಚಾರಕ್ಕೆ ನೂರಾರು ಜನರ ಗುಂಪು ಆಕೆಯ ತಾಯಿಯನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಿದ ಘಟನೆ ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ನಡೆದಿದೆ. ಈ ವೇಳೆ ಯುವತಿಯ ಸಹೋದರನ ಮೇಲೂ ಹಲ್ಲೆ ನಡೆಸಲಾಗಿದ್ದು ಆತ ಸಾವನ್ನಪ್ಪಿದ್ದಾನೆ.
18ರ ದಲಿತ ಯುವತಿಯೊಬ್ಬಳು ದಾಖಲಿಸಿದ್ದ ಪ್ರಕರಣವನ್ನು ಹಿಂಪಡೆಯುವಂತೆ ಕೆಲವರು ಒತ್ತಡ ಹೇರಿದ್ದಾರೆ. ಆದರೆ ಯುವತಿ ದೂರು ವಾಪಸ್ ಪಡೆಯಲು ಒಪ್ಪದಿದ್ದಾಗ ಈ ದಾಳಿ ನಡೆದಿದೆ. ಈ ಪ್ರಕರಣದಲ್ಲಿ ಒಂಬತ್ತು ಜನರ ಮೇಲೆ ಕೊಲೆ ಆರೋಪ ಹೊರಿಸಲಾಗಿದೆ. ಮೂವರ ವಿರುದ್ಧ ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಠ ಪಂಗಡಗಳ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಇಲ್ಲಿಯವರೆಗೂ ಎಂಟು ಜನರನ್ನು ಬಂಧಿಸಲಾಗಿದೆ ಎಂದು ಪೊಲಿಸರು ತಿಳಿಸಿದ್ದಾರೆ.
ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಯುವತಿಯ ತಾಯಿ, ಜನರ ಗುಂಪು ನಮ್ಮ ಮನೆಯನ್ನು ಧ್ವಂಸಗೊಳಿಸಿತು. ಮನೆಯ ಯಾವ ಸಾಮಾಗ್ರಿಯನ್ನೂ ಬಿಡದೆ ನಾಶ ಮಾಡಿದ್ದಾರೆ. ಮನೆಯ ಚಾವಣಿಯನ್ನು ಹಾಳು ಮಾಡಿದ್ದಾರೆ. ಬಳಿಕ ಇಬ್ಬರು ಮಕ್ಕಳನ್ನು ಹುಡುಕಿಕೊಂಡು ಮತ್ತೊಂದು ಮನೆಗೆ ಹೋದರು. ಅಲ್ಲಿ ಪತಿ ಹಾಗೂ ಮಕ್ಕಳ ಮೇಲೆ ಹಲ್ಲೆ ನಡೆಸಿ ಅವರನ್ನು ಹತ್ಯೆ ಮಾಡಿದ್ದಾರೆ ಎಂದಿದ್ದಾರೆ.
ಘಟನೆಯ ನಂತರ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಜಿಲ್ಲಾಡಳಿತ ಸೂಕ್ತ ಕ್ರಮಕೈಗೊಳ್ಳುವುದಾಗಿ ಮಹಿಳೆಗೆ ಭರವಸೆ ನೀಡಿದೆ.