ಅಯೋಧ್ಯೆಯಲ್ಲಿ ಈ ಬಾರಿ ಪ್ರಧಾನಿ ಮೋದಿ ಅವರಿಂದ ದೀಪಾವಳಿ ಉದ್ಘಾಟನೆ
ಗುರುವಾರ, 9 ಸೆಪ್ಟಂಬರ್ 2021 (08:41 IST)
ನವದೆಹಲಿ (ಸೆ. 09) : ಉತ್ತರ ಪ್ರದೇಶದಲ್ಲಿ ಮುಂದಿನ ವರ್ಷ ವಿಧಾನಸಭಾ ಚುನಾವಣೆ ಎದುರಾಗಲಿರುವ ಹಿನ್ನಲೆ ಈಗಾಗಲೇ ಬಿಜೆಪಿ ಸಿದ್ಧತೆ ಆರಂಭಿಸಿದೆ. ಎರಡನೇ ಬಾರಿ ಕೂಡ ಬಿಜೆಪಿ ಗೆಲ್ಲುವ ರಣತಂತ್ರ ಹೂಡಿದ್ದು, ಇದಕ್ಕಾಗಿ ಈಗಾಗಲೇ ಕಾರ್ಯ ಆರಂಭಿಸಿದೆ. ಇದೆ ವಿಧಾನಸಭಾ ಚುನಾವಣಾ ಲೆಕ್ಕಾಚಾರವನ್ನು ಗಮನದಲ್ಲಿರಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ ಈ ಬಾರಿ ಅಯೋಧ್ಯೆಯಲ್ಲಿ ದೀಪಾವಳಿ ಆಚರಣೆಯನ್ನು ಉದ್ಘಾಟಿಸುವ ಸಾಧ್ಯತೆ ಇದೆ.
ಅಯೋಧ್ಯೆಯ ಸರಯೂ ನದಿ ತಟದಲ್ಲಿ ಆಚರಿಸಲಾಗುವ ಈ ವಿಶೇಷ ದೀಪಾವಳಿ ಆಚರಣೆಯನ್ನು ಪ್ರತಿ ಬಾರಿ ಮುಖ್ಯಮಂತ್ರಿ ಯೋಗಿ ಆದಿತ್ಯ ನಾಥ್ ಉದ್ಘಾಟಿಸುತ್ತಾ ಬರುತ್ತಿದ್ದಾರೆ.
ಪ್ರಧಾನಿ ಮೋದಿ ಅವರು ನವೆಂಬರ್ 3 ರಂದು ಈ ಬೃಹತ್ ಕಾರ್ಯಕ್ರಮವನ್ನು ಉದ್ಘಾಟಿಸುವ ಸಾಧ್ಯತೆಯಿದೆ, ಇದಕ್ಕಾಗಿ ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರವು ಈಗಾಗಲೇ ಸಿದ್ಧತೆಗಳನ್ನು ಆರಂಭಿಸಿದೆ, ಅಯೋಧ್ಯೆಯ ಸರಯೂ ತಟದಲ್ಲಿ ಹೊಸ ಗಿನ್ನೆಸ್ ದಾಖಲೆ 6.5 ಲಕ್ಷ ದೀಪಗಳನ್ನು ಬೆಳಗಿಸಲಾಗುವುದು.
ಇನ್ನು ನರೇಂದ್ರ ಮೋದಿ ಅವರು ಈ ಕಾರ್ಯಕ್ರಮಕ್ಕೆ ಹಾಜರಾಗುವ ಕುರಿತು ಯಾವುದೇ ಅಧಿಕೃತ ಮಾಹಿತಿಯನ್ನು ಪ್ರಧಾನಿ ಸಚಿವಾಲಯ ಅಧಿಕೃತ ಪಡಿಸಿಲ್ಲ. ಆದರೆ, ಈ ಕುರಿತು ಮಾತನಾಡಿರುವ ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರದ ಉಪಾಧ್ಯಕ್ಷ ವಿಶಾಲ್ ಸಿಂಗ್, ಪ್ರಧಾನಿ ಮೋದಿ ಅವರನ್ನು ಮತ್ತೆ ಅಯೋಧ್ಯೆಯಲ್ಲಿ ನೋಡುತ್ತಿರುವುದು ನಮ್ಮ ಅದೃಷ್ಟ. ಈ ಬಾರಿ ದೀಪೋತ್ಸವಕ್ಕ ಅದ್ದೂರಿ ತಯಾರಿ ನಡೆಸಲಾಗುತ್ತಿದೆ. ಈಗಾಗಲೇ ಬಾಲಿವುಡ್ ನ ಪ್ರಖ್ಯಾತ ಕಲಾ ವಿನ್ಯಾಸಕ ನಿತಿನ್ ಚಂದ್ರಕಾಂತ್ ದೇಸರ್ ದೀಪೋತ್ಸವದ ಕಲ್ಪನೆ ಸಜ್ಜುಗೊಳಿಸಿದ್ದು, ಈ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರದ ಅನುಮೋದನೆಗೆ ಕಳುಹಿಸಲಾಗಿದೆ ಎಂದರು.