ವಿಶ್ವಾಸಮತಯಾಚನೆಗೆ ಸೂಚಿಸದಿದ್ದರೆ ಕಾನೂನು ಹೋರಾಟ: ಸ್ಟ್ಯಾಲಿನ್

ಭಾನುವಾರ, 10 ಸೆಪ್ಟಂಬರ್ 2017 (19:56 IST)
ತಮಿಳುನಾಡಿನಲ್ಲಿ ಮತ್ತೆ ರಾಜಕೀಯ ಮೇಲಾಟಗಳು ಗರಿಗೆದರಿವೆ. ಸಿಎಂ ಪಳನಿಸ್ವಾಮಿಯವರನ್ನ ವಿಶ್ವಾಸಮತಯಾಚನೆಗೆ ರಾಜ್ಯಪಾಲರು ಸೂಚಿಸದಿದ್ದರೆ ಕಾನೂನು ಹೋರಾಟ ನಡೆಸುವುದಾಗಿ ಡಿಎಂಕೆ ಮುಖಂಡ ಎಂ.ಕೆ. ಸ್ಟಾಲಿನ್ ಹೇಳಿದ್ದಾರೆ.
 

ಚೆನ್ನೈನಲ್ಲಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ ಸ್ಟಾಲಿನ್ ವಿಶ್ವಾಸಮತ ಯಾಚನೆಗೆ ಸೂಚಿಸುವಂತೆ ಕೋರಿದರು. ಗವರ್ನರ್ ಭೇಟಿ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಸ್ಟಾಲಿನ್, 2ನೇ ಬಾರಿಗೆ ರಾಜ್ಯಪಾಲ ವಿದ್ಯಾಸಾಗರ್ ರಾವ್`ಗೆ ಮನವಿ ಸಲ್ಲಿಸಿದ್ದೇನೆ. ಇದೇ ಕೊನೆಯ ಮನವಿ. ವಿಶ್ವಾಸಮತ ಯಾಚನೆಗೆ ಸೂಚಿಸಲು ಒಂದು ವಾರ ಸಮಯ ನೀಡಿದ್ದೇವೆ. ಮುಂದೆ ಕೋರ್ಟ್`ಗೆ ಹೋಗುತ್ತೇವೆ ಎಂದು ಸ್ಟಾಲಿನ್ ಹೇಳಿದ್ದಾರೆ.

ಇತ್ತೀಚೆಗೆ ಅಣ್ಣಾಡಿಎಂಕೆಯ ಪಳನಿಸ್ವಾಮಿ ಮತ್ತು ಪನ್ನೀರ್ ಸೆಲ್ವಂ ಬಣ ಒಂದಾದ ಬಳಿಕ ಮೂಲೆಗುಂಪಾಗಿದ್ದ ಶಶಿಕಲಾ ಆಪ್ತ ಟಿಟಿವಿ ದಿನಕರನ್ ಬಹಿರಂಗ ಬಂಡಾಯದ ಬಾವುಟ ಹಾರಿಸಿದ್ದರು. ರಾಜ್ಯಪಾಲರನ್ನ ಭೇಟಿ ಮಾಡಿ ನಮ್ಮ ಬೆಂಬಲ ಪಳನಿಸ್ವಾಮಿಗೆ ಇಲ್ಲವೆಂದು ಮನವಿ ತಿಳಿಸಿದ್ದರು. ಹೀಗಾಗಿ, ಪಳನಿಸ್ವಾಮಿ ಸರ್ಕಾರಕ್ಕೆ ಬಹುಮತ ಇಲ್ಲವೆಂಬುದು ಸ್ಟಾಲಿನ್ ವಾದ. ಈ ಮಧ್ಯೆ, ಇಬ್ಬರ ಜಗಳ ಮೂರನೇಯವರಿಗೆ ಲಾಭ ಎಂಬಂತೆ 89 ಶಾಸಕರನ್ನ ಹೊಂದಿರುವ ಡಿಎಂಕೆ, ಕಾಂಗ್ರೆಸ್, ಅಣ್ಣಾಡಿಎಂಕೆಯ ಬಂಡಾಯ ಶಾಸಕರ ಬೆಂಬಲ ಪಡೆದು ಸರ್ಕಾರ ರಚಿಸುವ ಕನಸು ಕಾಣುತ್ತಿದೆ ಎಂಬ ವರದಿಗಳು ಕೇಳಿಬರುತ್ತಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ