ಬೆಂಗಳೂರು: ನಗರವನ್ನು ಬೆಚ್ಚಿಬೀಳಿಸಿದ್ದ ವೈದ್ಯೆ ಕೃತಿಕಾ ರೆಡ್ಡಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪತಿ ಡಾ ಮಹೇಂದ್ರ ರೆಡ್ಡಿ ಸ್ಪೋಟಕ ಸತ್ಯವೊಂದನ್ನು ಬಾಯ್ಬಿಟ್ಟಿದ್ದಾನೆ.
ಡಾ ಮಹೇಂದ್ರ ರೆಡ್ಡಿ ತನ್ನ ಪತ್ನಿ ಕೃತಿಕಾ ರೆಡ್ಡಿಗೆ ಓವರ್ ಡೋಸ್ ಅನಸ್ತೇಷಿಯಾ ಕೊಟ್ಟು ಕೊಲೆ ಮಾಡಿದ್ದಾನೆ ಎನ್ನುವುದು ಆರೋಪವಾಗಿದೆ. ಈ ಸಂಬಂಧ ಪೊಲೀಸರನ್ನು ಆತನನ್ನು ಬಂಧಿಸಿ ತೀವ್ರ ವಿಚಾರಣೆಗೊಳಪಡಿಸುತ್ತಿದ್ದಾರೆ. ಮೊದಲು ನಾನು ಕೊಲೆ ಮಾಡಿಲ್ಲ ಎಂದೇ ಹೇಳುತ್ತಿದ್ದ ಆತ ಈಗ ಕೊನೆಗೂ ಸತ್ಯ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ.
ಕೃತಿಕಾಗೆ ಪ್ರೊಪೊಫೋಲ್ ಎಂಬ ಅನಸ್ತೇಷಿಯಾ ನೀಡಲಾಗಿತ್ತು ಎನ್ನುವುದು ಎಫ್ಎಸ್ಎಲ್ ವರದಿಯಲ್ಲಿ ಬಹಿರಂಗವಾಗಿತ್ತು. ಇದೀಗ ಆತ ಅದನ್ನು ಎಲ್ಲಿಂದ ಖರೀದಿಸಿದ್ದ ಎನ್ನುವುದನ್ನು ಬಾಯ್ಬಿಟ್ಟಿದ್ದಾನೆ.
ಮೆಡಿಕಲ್ ಶಾಪ್ ಒಂದಕ್ಕೆ ಹೋಗಿ ಪ್ರೊಪೊಫೋಲ್ ಅನಸ್ತೇಷಿಯಾ ಔಷಧಿ ನೀಡುವಂತೆ ಕೇಳಿದ್ದೆ. ಆದರೆ ಮೊದಲು ಮೆಡಿಕಲ್ ನವರು ಅದನ್ನು ಕೊಡಲು ಒಪ್ಪಲಿಲ್ಲ. ನಂತರ ನಾನು ಕೂಡಾ ಒಬ್ಬ ಸರ್ಜನ್ ಎಂದು ಪ್ರಿಸ್ಕ್ರಿಪ್ಷನ್ ತೋರಿಸಿದೆ. ಒಬ್ಬ ರೋಗಿಯ ಟ್ರೀಟ್ ಮೆಂಟ್ ಗೆ ಬೇಕಾಗಿದೆ ಎಂದು ಹೇಳಿದ್ದೆ. ಹೀಗಾಗಿ ಅವರ ಕೊನೆಗೆ ನೀಡಿದರು ಎಂದು ಆತ ಹೇಳಿದ್ದಾನೆ.
ರಾತ್ರಿ ನಿಶ್ಯಕ್ತಿಯಿಂದ ಮಲಗಿದ್ದ ಕೃತಿಕಾಗೆ ಐವಿ ಇಂಜೆಕ್ಷನ್ ಮೂಲಕ ಪ್ರೊಪೊಫೋಲ್ ಇಂಜೆಕ್ಟ್ ಮಾಡಿದ್ದ. ಬೆಳಿಗ್ಗೆ ಆಕೆ ಓವರ್ ಡೋಸ್ ಆಗಿ ಜೀವ ಕಳೆದುಕೊಂಡಿದ್ದಳು. ಮೊದಲು ಆತ ಐವಿ ಇಂಜೆಕ್ಷನ್ ನೀಡಿದ್ದ. ಬಳಿಕ ಅನಸ್ತೇಷಿಯಾ ನೀಡಲಾಗಿತ್ತು. ಈ ವೇಳೆ ಆಕೆ ಕೋಮಾಗೆ ಜಾರಿದಳು. ಕೋಮಾದಿಂದ ಹೊರತರಲು ಮೆಡಿಸಿನ್ ನೀಡದೇ ಆಕೆ ಉಸಿರು ಚೆಲ್ಲಿದ್ದಾಳೆ.
ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಡಾ ಕೃತಿಕಾ ರೆಡ್ಡಿ ಮತ್ತು ಮಹೇಂದ್ರ ರೆಡ್ಡಿ ಕೆಲಸ ಮಾಡುತ್ತಿದ್ದರು. ಮದುವೆಯಾಗಿ ಕೇವಲ 11 ತಿಂಗಳಿಗೇ ಮಹೇಂದ್ರ ತನ್ನ ಪತ್ನಿಯನ್ನು ಕೊಲೆ ಮಾಡಿದ್ದ. ಏಪ್ರಿಲ್ ನಲ್ಲಿ ಘಟನೆ ನಡೆದಿದ್ದು ಈಗ ಎಫ್ಎಸ್ಎಲ್ ವರದಿಯ ನಂತರವಷ್ಟೇ ಇದು ಕೊಲೆ ಎಂದು ಬಯಲಾಗಿತ್ತು.