ಭೋಪಾಲ್ ಜೈಲಿನಿಂದ ಪರಾರಿಯಾಗಿದ್ದ 8 ಸಿಮಿ ಉಗ್ರರು ಎನ್‌ಕೌಂಟರ್‌ನಲ್ಲಿ ಫಿನಿಶ್

ಸೋಮವಾರ, 31 ಅಕ್ಟೋಬರ್ 2016 (12:38 IST)
ಸೆಂಟ್ರಲ್ ಜೈಲಿನಿಂದ ಪರಾರಿಯಾಗಿದ್ದ ನಿಷೇಧಿತ ಸಿಮಿ ಸಂಘಟನೆಯ ಎಂಟು ಉಗ್ರರನ್ನು ನಗರದ ಹೊರವಲಯದಲ್ಲಿ ಪೊಲೀಸರು ನಡೆಸಿದ ಎನ್‌ಕೌಂಟರ್‌ಗೆ ಬಲಿಯಾಗಿದ್ದಾರೆ.
 
ಇಂದು ಬೆಳಗಿನ ಜಾವ ಸಿಮಿ ಉಗ್ರರು ಭದ್ರತಾ ಸಿಬ್ಬಂದಿಯನ್ನು ಹತ್ಯೆ ಮಾಡಿ, ಬೆಡ್‌ಶೀಟ್‌ಗಳನ್ನು ಹಗ್ಗವಾಗಿ ಮಾಡಿಕೊಂಡು ಜೈಲಿನ 20 ಅಡಿ ಎತ್ತರದ ಗೋಡೆಯಿಂದ ಹಾರಿ ಪರಾರಿಯಾಗಿದ್ದರು.
 
ಅಮ್ಜದ್, ಜಾಕೀರ್ ಹುಸೇನ್ ಸಾದಿಕ್, ಮೊಹಮ್ಮದ್ ಸಲಿಕ್, ಮುಜಿಬ್ ಶೇಖ್, ಮೆಹಬೂಡ್ ಗುಡ್ಡು, ಮೊಹಮ್ಮದ್ ಖಾಲಿದ್ ಅಹ್ಮದ್, ಅಕೀಲ್ ಮತ್ತು ಮಾಜಿದ್ ಎಂದು ಗುರುತಿಸಲಾಗಿದೆ. 
 
ಸಿಮಿ ಉಗ್ರರು ಜೈಲಿನಿಂದ ಪರಾರಿಯಾಗಿರುವ ಸುದ್ದಿ ತಿಳಿಯುತ್ತಿದ್ದಂತೆ ಅವರ ಬಂಧನಕ್ಕಾಗಿ ಪೊಲೀಸರು ಎಲ್ಲಾ ಕಡೆ ಹೈ ಅಲರ್ಟ್ ಘೋಷಿಸಿ ಚೆಕ್‌ಪೋಸ್ಟ್‌ಗಳಲ್ಲಿ ಭಾರಿ ತಪಾಸಣೆ ಆರಂಭಿಸಿದ್ದರು.
 
ಅತ್ಯಂತ ಭದ್ರತೆಯಿರುವ ಜೈಲಿನಿಂದ ಸಿಮಿ ಉಗ್ರರು ಪರಾರಿಯಾಗಿದ್ದ ಬಗ್ಗೆ ಗೃಹ ಸಚಿವ ಭೂಪೇಂದ್ರ ಸಿಂಗ್ ಇದೊಂದು ಭದ್ರತಾ ಲೋಪ ಎಂದು ಒಪ್ಪಿಕೊಂಡಿದ್ದಾರೆ.
 
ಇದಕ್ಕಿಂತ ಮೊದಲು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್, ಜೈಲಿನ ಡಿಐಜಿ, ಜೈಲಿನ ಸೂಪರಿಟೆಂಡೆಂಟ್ ಸೇರಿದಂತೆ ಇತರ ಇಬ್ಬರು ಅಧಿಕಾರಿಗಳನ್ನು ಅಮಾನತ್ತುಗೊಳಿಸಿ ಆದೇಶ ಹೊರಡಿಸಿದ್ದರು.
 
ಸಿಮಿ ಉಗ್ರರು ಸ್ಟೀಲ್ ಪ್ಲೇಟ್‌‍ ಮತ್ತು ಗ್ಲಾಸ್‌ನಿಂದ ಭದ್ರತಾ ಸಿಬ್ಬಂದಿಯ ಕತ್ತು ಕತ್ತರಿಸಿ ಹಾಕಿ ಪರಾರಿಯಾಗಿದ್ದರು. 
 
ಏತನ್ಮಧ್ಯೆ, ಕೇಂದ್ರ ಗೃಹ ಸಚಿವಾಲಯ ಜೈಲಿನಿಂದ ಸಿಮಿ ಉಗ್ರರು ಪರಾರಿಯಾದ ಘಟನೆಗೆ ಸಂಬಂಧಿಸಿದ ವರದಿ ನೀಡುವಂತೆ  ಆದೇಶ ನೀಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ