ಮಹಾರಾಷ್ಟ್ರ ಸಿಎಂ ಪದಗ್ರಹಣದ ಗದ್ದಲದ ನಡುವೆ ಆಸ್ಪತ್ರೆ ಸೇರಿದ ಏಕನಾಥ್ ಶಿಂಧೆ

Krishnaveni K

ಮಂಗಳವಾರ, 3 ಡಿಸೆಂಬರ್ 2024 (15:21 IST)
ಮುಂಬೈ: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ನಡೆದು ಇಷ್ಟು ದಿನ ಕಳೆದರೂ ಇನ್ನೂ ನೂತನ ಸಿಎಂ ಯಾರು ಎಂದು ಇನ್ನೂ ಅಧಿಕೃತವಾಗಿ ಅಧಿಕಾರ ಸ್ವೀಕರಿಸಿಲ್ಲ. ಈ ನಡುವೆ ಹಂಗಾಮಿ ಸಿಎಂ ಏಕನಾಥ ಶಿಂಧೆ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಏಕನಾಥ ಶಿಂಧೆ ಕಳೆದ ಎರಡು ದಿನಗಳಿಂದ ಜ್ವರದಿಂದ ಬಳಲುತ್ತಿದ್ದಾರೆ. ಇದರ ನಡುವೆಯೂ ಅವರು ತಮ್ಮ ಊರಿಗೆ ತೆರಳಿದ್ದರು. ಅದಾದ ಬಳಿಕ ಮುಂಬೈಗೆ ವಾಪಸಾಗಿದ್ದರು. ಈ ವೇಳೆ ಆರೋಗ್ಯ ಮತ್ತಷ್ಟು ಬಿಗಡಾಯಿಸಿದೆ. ಹೀಗಾಗಿ ಏಕನಾಥ ಶಿಂಧೆ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸದ್ಯಕ್ಕೆ ಅವರಿಗೆ ಮಲೇರಿಯಾ ಮತ್ತು ಡೆಂಗ್ಯೂ ಜ್ವರ ಪರೀಕ್ಷೆ ಮಾಡಲಾಗಿದ್ದು ಎರಡರಲ್ಲೂ ನೆಗೆಟಿವ್ ವರದಿ ಬಂದಿದೆ ಎನ್ನಲಾಗಿದೆ. ಆದರೆ ಅವರಿಗೆ ಪ್ಲೇಟ್ ಲೆಟ್ ಕಡಿಮೆಯಾಗಿದ್ದು ತೀವ್ರ ಗಂಟಲು ನೋವು ಮತ್ತು ಜ್ವರದಿಂದ ಬಳಲಿದ್ದಾರೆ ಎಂದು ತಿಳಿದುಬಂದಿದೆ. ಸದ್ಯಕ್ಕೆ ಅವರ ಪುತ್ರ ಶ್ರೀಕಾಂತ್ ಶಿಂಧೆ ಜೊತೆಗಿದ್ದಾರೆ.

ಮಹಾರಾಷ್ಟ್ರದಲ್ಲಿ ಮುಂದಿನ ಮುಖ್ಯಮಂತ್ರಿಯಾಗಿ ದೇವೇಂದ್ರ ಫಡ್ನವಿಸ್ ಅಧಿಕಾರಕ್ಕೇರಲಿದ್ದು, ಏಕನಾಥ ಶಿಂಧೆ ಪುತ್ರ ಶ್ರೀಕಾಂತ್ ಶಿಂಧೆ ಉಪ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಸುದ್ದಿಗಳಿವೆ. ಡಿಸೆಂಬರ್ 5 ಕ್ಕೆ ಪ್ರಮಾಣ ವಚನ ಕಾರ್ಯಕ್ರಮವಿದ್ದು ಅಷ್ಟರಲ್ಲಿ ಏಕನಾಥ ಶಿಂಧೆ ಗುಣಮುಖರಾಗುವ ನಿರೀಕ್ಷೆಯಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ