ಮಾಜಿ ಸಚಿವ ಬಾಬಾ ಸಿದ್ದಿಕ್ ಹತ್ಯೆ ಪೂರ್ವ ನಿಯೋಜಿತ: ಬಿಷ್ಣೋಯ್ ಗ್ಯಾಂಗ್​ ಕೈವಾಡದ ಶಂಕೆ

Sampriya

ಭಾನುವಾರ, 13 ಅಕ್ಟೋಬರ್ 2024 (13:58 IST)
ಮುಂಬೈ: ಎನ್‌ಸಿಪಿ ನಾಯಕ, ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದಿಕ್ ಬರ್ಬರ ಹತ್ಯೆ ಹಿಂದೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್​ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ. ಈ ಮಧ್ಯೆ ಮುಂಬೈ ಪೊಲೀಸರು ಪ್ರಕರಣದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ಹಲವು ಮಹತ್ವದ ಸುಳಿವು ಲಭ್ಯವಾಗಿದೆ.

ಬಾಂದ್ರಾದ ನಿರ್ಮಲ್ ನಗರದ ಬಳಿ ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಅಜಿತ್ ಪವಾರ್ ಬಣದ ನಾಯಕ ಸಿದ್ದಿಕಿ ಮೇಲೆ ಶನಿವಾರ ತಡರಾತ್ರಿ ಗುಂಡು ಹಾರಿಸಿ ಹತ್ಯೆ ಮಾಡಲಾಗಿತ್ತು.

ಬಾಬಾ ಸಿದ್ದಿಕಿ ಹತ್ಯೆ ಪೂರ್ವ ಯೋಜಿತ ಎಂದು ಪೊಲೀಸರು ತಿಳಿಸಿದ್ದಾರೆ. ಸಂಭವನೀಯ ಸುಪಾರಿ ಕೊಲೆ, ವ್ಯಾಪಾರ ವೈಷಮ್ಯ ಸೇರಿದಂತೆ ವಿವಿಧ ಕೋನಗಳಿಂದ ಅಪರಾಧ ವಿಭಾಗವು ಪ್ರಕರಣದ ತನಿಖೆಯನ್ನು ಪ್ರಾರಂಭಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಸಿದ್ದಿಕಿ ಮೇಲೆ ಮೂವರು ಗುಂಡಿನ ದಾಳಿ ನಡೆಸಿದ್ದಾರೆ. 24 ಗಂಟೆಯೊಳಗೆ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇದೇ ವೇಳೆ ಮೂರನೇ ಆರೋಪಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

ಮುಂಬೈ ಕ್ರೈಂ ಬ್ರಾಂಚ್ ನಿರ್ಮಲ್ ನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ, ಶಸ್ತ್ರಾಸ್ತ್ರ ಕಾಯ್ದೆ ಮತ್ತು ಮಹಾರಾಷ್ಟ್ರ ಪೊಲೀಸ್ ಕಾಯ್ದೆಯ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಕೊಲೆಗೆ ಸಂಬಂಧಿಸಿದಂತೆ ಪ್ರಕರಣವನ್ನು ದಾಖಲಿಸಲಾಗಿದೆ. ಆರೋಪಿಗಳು ಮುಂಬೈನಲ್ಲಿ ಕೆಲಕಾಲ ಇದ್ದು, ಸಿದ್ದಿಕಿ ಮೇಲೆ ತೀವ್ರ ನಿಗಾ ಇರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ