ನೋಟು ನಿಷೇಧದಲ್ಲಿ 3-5 ಲಕ್ಷ ಕೋಟಿ ಅವ್ಯವಹಾರ: ಪ್ರಧಾನಿ ಮೋದಿ ವಿರುದ್ಧ ಬಾಬಾ ರಾಮದೇವ್ ಗುಡುಗು

ಶುಕ್ರವಾರ, 16 ಡಿಸೆಂಬರ್ 2016 (13:36 IST)
ಪ್ರಧಾನಮಂತ್ರಿ ನರೇಂದ್ರ ಮೋದಿ ಆತ್ಮಿಯ ಬಳಗದಲ್ಲಿದ್ದ ಬಾಬಾ ರಾಮದೇವ್ ಇದೀಗ ಉಲ್ಟಾ ಹೊಡೆದಿದ್ದು, ನೋಟು ನಿಷೇಧದಲ್ಲಿ 3 ರಿಂದ 5 ಲಕ್ಷ ಕೋಟಿ ಅವ್ಯವಹಾರವಾಗಿದೆ ಎಂದು ಆರೋಪಿಸಿದ್ದಾರೆ.
 
ಆಮ್ ಆದ್ಮಿ ಪಕ್ಷದ ಮುಖ್ಯಸ್ಥ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ನೋಟು ನಿಷೇಧದಲ್ಲಿ 8 ಲಕ್ಷ ಕೋಟಿ ಅವ್ಯವಹಾರವಾಗಿದೆ ಎಂದು ಆರೋಪಿಸಿರುವ ಮಧ್ಯೆ, ಬಾಬಾ ರಾಮದೇವ್ ಕೂಡಾ ಆರೋಪ ಮಾಡಿರುವುದು ಬಿಜೆಪಿಗೆ ಆಘಾತ ತಂದಿದೆ.  
 
ಮಾಧ್ಯಮಗಳೊಂದಿಗೆ ಮಾತನಾಡಿದ ಬಾಬಾ ರಾಮದೇವ್, ಭ್ರಷ್ಟ ಬ್ಯಾಂಕರ್‌ಗಳ ಸಲಹೆ ಪಡೆದ ಮೋದಿ ದೇಶಾದ್ಯಂತ ನೋಟು ನಿಷೇಧ ಜಾರಿಗೊಳಿಸಿದ್ದಾರೆ. ನೋಟು ನಿಷೇಧ ಜಾರಿಯಲ್ಲಿ 3-5 ಲಕ್ಷ ಕೋಟಿ ಅವ್ಯವಹಾರವಾಗಿದೆ ಎಂದು ಕಿಡಿಕಾರಿದ್ದಾರೆ. 
 
ನೋಟು ನಿಷೇಧದಲ್ಲಿ ಭಾರಿ ಪ್ರಮಾಣದ ಭ್ರಷ್ಟಾಚಾರವಾಗಿರುವುದಲ್ಲದೇ ಅದನ್ನು ಜಾರಿಗೊಳಿಸಿರುವ ಕ್ರಮವಂತೂ ಹೀನಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ದೇಶಾದ್ಯಂತ ನೋಟು ನಿಷೇಧದಿಂದಾಗಿ ಬಡವರಿಗೆ, ಮಧ್ಯಮ ವರ್ಗದವರು ಜೀವನ ನಡೆಸಲಾರದಂತಹ ಸ್ಥಿತಿ ಅನುಭವಿಸುತ್ತಿದ್ದಾರೆ. ಕೂಡಲೇ ಕೇಂದ್ರ ಸರಕಾರ ನೋಟು ನಿಷೇಧವನ್ನು ಹಿಂಪಡೆಯಬೇಕು ಎಂದು ಯೋಗ ಗುರು ಬಾಬಾ ರಾಮದೇವ್ ಪ್ರಧಾನಿ ಮೋದಿಯವರನ್ನು ಒತ್ತಾಯಿಸಿದ್ದಾರೆ.  

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ