ಜಯಲಲಿತಾ ಸಹಿ ಫೋರ್ಜರಿ?

ಸೋಮವಾರ, 10 ಅಕ್ಟೋಬರ್ 2016 (19:01 IST)
ಅನಾರೋಗ್ಯದ ಹಿನ್ನೆಲೆಯಲ್ಲಿ ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿರುವ ಮುಖ್ಯಮಂತ್ರಿ ಜಯಲಲಿತಾ ಅವರಿಗೆ ಚೆನ್ನೈನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದ್ದು 18 ದಿನಗಳ ಬಳಿಕ ಅವರು ಇಂದು ಮೊದಲ ಬಾರಿಗೆ ಕಣ್ಣು ಬಿಟ್ಟಿದ್ದಾರೆಂದು ಹೇಳಲಾಗುತ್ತಿದೆ. ಈ ಮಧ್ಯೆ ಎಐಡಿಎಂಕೆ ಪಕ್ಷದ ಉಚ್ಚಾಟಿತ ನಾಯಕಿ ಶಶಿಕಲಾ ಪುಷ್ಪಾ ಹೊಸ ಬಾಂಬ್ ಸಿಡಿಸಿ ಗಮನ ಸೆಳೆದಿದ್ದಾರೆ.
ರಾಜಕೀಯ ಲಾಭಕ್ಕಾಗಿ ಸಿಎಂ ಜಯಾ ಅವರ ಸಹಿಯನ್ನು ಫೋರ್ಜರಿ ಮಾಡಿರುವ ಸಾಧ್ಯತೆ ಇದೆ ಎಂದು ಪಕ್ಷದ ಉಚ್ಚಾಟಿತ ಸದಸ್ಯೆ ಶಶಿಕಲಾ ಪುಷ್ಪಾ ರಾಜ್ಯಪಾಲ ಸಿ. ವಿದ್ಯಾಸಾಗರ್ ಅವರಿಗೆ ಪತ್ರ ಬರೆದಿದ್ದಾರೆ. 
 
ಜಯಾ ಅವರ ಗೈರು ಹಾಜರಿಯಲ್ಲಿ ಸರ್ಕಾರದ ಪ್ರಧಾನ ಉಪ ಕಾರ್ಯದರ್ಶಿ ಅವರು ಸರ್ಕಾರವನ್ನು ಮುಂದುವರೆಸುವಂತೆ ನಾಮ ನಿರ್ದೇಶನ ಮಾಡಲು ಅವರ ಸುತ್ತಲಿರುವ ಕೆಲವು ವ್ಯಕ್ತಿಗಳು ಸಹಿಯನ್ನು ನಕಲು ಮಾಡಲು ಪ್ರಯತ್ನಿಸಿರಬಹುದು. ಹೀಗಾಗಿ ಜಯಾ ಅವರು ದಾಖಲಾದ ದಿನದಿಂದ ಇಲ್ಲಿಯವರೆಗೆ ಮಾಡಿರುವ ಸಹಿಗಳನ್ನು ಪರಿಶೀಲಿಸಬೇಕು ಎಂದು ಅವರು ಪತ್ರದಲ್ಲಿ ಮನವಿ ಮಾಡಿಕೊಂಡಿದ್ದಾರೆ. 
 
ಕಳೆದ ಆಗಸ್ಟ್ ತಿಂಗಳಲ್ಲಿ ಶಶಿಕಲಾ ಪುಷ್ಪ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು. 
 
ಈ ಮಧ್ಯೆ ಜಯಲಲಿತಾ ಅವರ ಆರೋಗ್ಯ ವಿಚಾರಿಸಲು ಅಪೋಲೋ ಆಸ್ಪತ್ರೆ ಮುಂದೆ ರಾಜಕೀಯ ನೇತಾರರು ಸಾಲುಗಟ್ಟಿದ್ದಾರೆ. ಪಾಂಡಿಚೇರಿ ರಾಜ್ಯಪಾಲೆ ಕಿರಣ್ ಬೇಡಿ,  ಮುಖ್ಯಮಂತ್ರಿ ವಿ. ನಾರಾಯಣಸ್ವಾಮಿ ಭಾನುವಾರ ಅಪೋಲೋ ಆಸ್ಪತ್ರೆಗೆ ಭೇಟಿ ನೀಡಿ ಜಯಾ ಆರೋಗ್ಯವನ್ನು ವಿಚಾರಿಸಿದ್ದಾರೆ. 
 
ಜತೆಗೆ ಅವರ ಆರೋಗ್ಯ ಸುಧಾರಿಸಲೆಂದು ರಾಜ್ಯಾದ್ಯಂತ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ