ಪಾಕ್‌ನಲ್ಲಿ ಜಲಕ್ಷಾಮದ ಭೀತಿ: ಸಿಂಧೂ ಜಲಒಪ್ಪಂದ ಅಮಾನತು ಮರು ಪರಿಶೀಲನೆಗೆ ಗೋಗರೆಯುತ್ತಿರುವ ಪಾಕ್‌

Sampriya

ಗುರುವಾರ, 15 ಮೇ 2025 (14:12 IST)
Photo Courtesy X
ನವದೆಹಲಿ: ಪೆಹಲ್ಗಾಮ್‌ನಲ್ಲಿ ನಡೆದ ಹತ್ಯಾಕಾಂಡದ ಬಳಿಕ ಕೇಂದ್ರ ಸರ್ಕಾರ ಕೈಗೊಂಡಿರುವ ಸಿಂಧೂ ಜಲ ಒಪ್ಪಂದ ಅಮಾನತು ನಿರ್ಧಾರವು ಪಾಕಿಸ್ತಾನದ ನಿದ್ದೆಗಿಡಿಸಿದೆ.

ಉಭಯ ದೇಶಗಳ ನಡುವೆ ಸಂಘರ್ಷದ ವಾತಾವರಣ ಶಮನವಾದರೂ ಸಿಂಧೂ ಜಲ ಒಪ್ಪಂದ ಅಮಾನತು ನಿರ್ಧಾರದಿಂದ ಭಾರತ ಹಿಂದೆ ಸರಿಯದಿರುವುದು ಪಾಕಿಸ್ಥಾನದಲ್ಲಿ ಜಲಕ್ಷಾಮದ ಭೀತಿ ಎದುರಾಗಿದೆ.

ಸಿಂಧೂ ಜಲ ಒಪ್ಪಂದ ಅಮಾನತು ನಿರ್ಧಾರವನ್ನು ಮರು ಪರಿಶೀಲಿಸುವಂತೆ ಪಾಕಿಸ್ತಾನ ಗೋಗರೆದಿದೆ. ಪಾಕಿಸ್ತಾನದ ಜಲಸಂಪನ್ಮೂಲ ಕಾರ್ಯದರ್ಶಿ ಸೈಯ್ಯದ್ ಅಲಿ ಮುರ್ತಝಾ ಈ ಸಂಬಂಧ ಭಾರತದ ಜಲ ಶಕ್ತಿ ಸಚಿವಾಲಯದ ಕಾರ್ಯದರ್ಶಿ ದೇಬಶ್ರೀ ಮುಖರ್ಜಿಯವರಿಗೆ ಪತ್ರ ಬರೆದಿದ್ದಾರೆ.

ಲಕ್ಷಾಂತರ ಜನ ಸಿಂಧೂ ನದಿ ನೀರಿನ ಮೇಲೆ ಅವಲಂಬಿತರಾಗಿರುವುದರಿಂದ ನಿರ್ಧಾರವನ್ನು ಮರುಪರಿಶೀಲಿಸಬೇಕು. ಭಾರತದ ನಿರ್ಧಾರವನ್ನು ಏಕಪಕ್ಷೀಯ ಮತ್ತು ಕಾನೂನು ಬಾಹಿರ ಎಂದಿರುವ ಅವರು, ಇದು ಪಾಕಿಸ್ತಾನದ ಜನತೆ ಮತ್ತು ಆರ್ಥಿಕತೆಯ ಮೇಲಿನ ದಾಳಿ ಎಂದು ಆಪಾದಿಸಿದ್ದಾರೆ. ಅಲ್ಲದೇ ಈ ಬಗ್ಗೆ ಚರ್ಚಿಸಲು ತಮ್ಮ ಸರ್ಕಾರ ಸಿದ್ಧವಾಗಿದೆ ಎಂದೂ ಹೇಳಿದ್ದಾರೆ.

ಈ ಬೆಳವಣಿಗೆಯ ಬಗ್ಗೆ ಭಾರತ ಯಾವುದೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ. ಸದ್ಯ ಈ ನಿರ್ಧಾರದಲ್ಲಿ ಭಾರತದ ನಿಲುವು ಬದಲಾಗುವ ಸಾಧ್ಯತೆಯಿಲ್ಲ ಎಂದು ಮೂಲಗಳು ಹೇಳಿವೆ.

ಜಮ್ಮು ಮತ್ತು ಕಾಶ್ಮೀರವನ್ನು ಗುರಿಯಾಗಿಸಿಕೊಂಡು ನಡೆಯುತ್ತಿರುವ ಗಡಿಯಾಚೆಗಿನ ಭಯೋತ್ಪಾದನೆಯಿಂದಾಗಿ ಒಪ್ಪಂದ ಅಮಾನತು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಭಾರತ ಪುನರುಚ್ಚರಿಸಿದೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ