ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಎನ್ ಡಿಎ ಮೈತ್ರಿ ಪಕ್ಷಗಳ ವಿರುದ್ಧ ಹೋರಾಡಲು ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ತಮ್ಮ ಕಾರ್ಯಕರ್ತರಿಗೆ ಸಂದೇಶ ನೀಡಿದ್ದಾರೆ.
ರಾಹುಲ್ ಗಾಂಧಿ ವಿಡಿಯೋ ಸಂದೇಶ ಮೂಲಕ ಕಾರ್ಯಕರ್ತರಿಗೆ ಬಿಜೆಪಿ, ಆರ್ ಎಸ್ಎಸ್ ವಿರುದ್ಧ ಬೀದಿ ಬೀದಿಗಳಲ್ಲಿ ಹೋರಾಡಿ ಎಂದು ಕರೆಕೊಟ್ಟಿದ್ದಾರೆ. ನೀವು ನಮ್ಮ ಡಿಎನ್ಎ, ನಮ್ಮ ಜೀವಾಳ. ಈ ಚುನಾವಣೆಯಲ್ಲಿ ನಿಮ್ಮ ಪಾತ್ರ ಬಹಳ ದೊಡ್ಡದು ಎಂದು ಕಾರ್ಯಕರ್ತರನ್ನು ಹುರಿದುಂಬಿಸಿದ್ದಾರೆ.
ನಿನ್ನೆ ರಾಹುಲ್ ಗಾಂಧಿ ಮಂಡ್ಯದಲ್ಲಿ ಕಾಂಗ್ರೆಸ್ ಸಮಾವೇಶದಲ್ಲಿ ಭಾಗಿಯಾಗಿದ್ದರು. ನಿನ್ನೆ ಕರ್ನಾಟಕ ಪ್ರವಾಸ ಮುಗಿಸಿದ ಬಳಿಕ ಕಾರ್ಯಕರ್ತರಿಗೆ ವಿಡಿಯೋ ಸಂದೇಶ ನೀಡಿದ್ದಾರೆ. ನೀವು ನಮ್ಮ ಬೆನ್ನುಲುಬು, ಹೋರಾಟಗಾರರು ಎಂದು ಕಾರ್ಯಕರ್ತರಿಗೆ ಹೇಳಿದ್ದಾರೆ.
ಬಿಜೆಪಿ, ಆರ್ ಎಸ್ಎಸ್ ಭಾರತದ ಸಿದ್ಧಾಂತಗಳ ವಿರೋಧಿ. ಅವರು ನಮ್ಮ ಸಂವಿಧಾನ, ಪ್ರಜಾಪ್ರಭುತ್ವ, ದೇಶ, ನಮ್ಮ ಸಾಂಸ್ಥಿಕ ಸಿದ್ಧಾಂತಗಳ ಮೇಲೆ ದಾಳಿ ಮಾಡುತ್ತಿದ್ದಾರೆ. ಚುನಾವಣಾ ಆಯೋಗವನ್ನೂ ತಮ್ಮ ಹದ್ದುಬಸ್ತಿನಲ್ಲಿಟ್ಟುಕೊಂಡಿದ್ದಾರೆ. ಭಾರತದ ಒಟ್ಟು ಕಾನೂನು ಚೌಕಟ್ಟನ್ನು ತಮ್ಮ ಮುಷ್ಠಿಯಲ್ಲಿಟ್ಟುಕೊಂಡಿದ್ದಾರೆ. ನೀವು ಆರ್ ಎಸ್ಎಸ್ ಸಿದ್ಧಾಂತದ ವಿರುದ್ಧ ಬೀದಿ ಬೀದಿಯಲ್ಲಿ ಹಳ್ಳಿಗಳಲ್ಲಿ ಹೋರಾಡಿ. ನೀವು ಹೋರಾಟಗಾರರು. ಕಾಂಗ್ರೆಸ್ ಅತ್ಯುತ್ತಮ ಪ್ರಣಾಳಿಕೆಯನ್ನು ಹೊರತಂದಿದೆ. ಇದರಲ್ಲಿ ದೇಶದ ಮಹಿಳೆಯರನ್ನು ಸಬಲೀಕರಣಗೊಳಿಸಲು ವರ್ಷಕ್ಕೆ 1 ಲಕ್ಷ ರೂ. ಅವರ ಖಾತೆಗೆ ಹಾಕಲಾಗುತ್ತದೆ. ನಾವು ಅಗ್ನಿವೀರ್ ಯೋಜನೆಯನ್ನು ರದ್ದುಗೊಳಿಸಲಿದ್ದೇವೆ. ಜಿಎಸ್ ಟಿ ನಿಯಮದಲ್ಲಿ ಬದಲಾವಣೆ ತರಲಿದ್ದೇವೆ. ಗುತ್ತಿಗೆ ನೌಕರರನ್ನು ಖಾಯಂಗೊಳಿಸಲಿದ್ದೇವೆ ಎಂದು ಕರೆ ನೀಡಿದ್ದಾರೆ.
ನಾವು ನಿಮ್ಮನ್ನು ನಂಬಿದ್ದೇವೆ. ನಾವು ನಿಮ್ಮನ್ನು ಪ್ರೀತಿಸುತ್ತೇವೆ. ನಿಮ್ಮೆಲ್ಲರಿಗೂ ನನ್ನ ಶುಭ ಹಾರೈಕೆಗಳು. ಈ ಚುನಾವಣೆಯಲ್ಲಿ ನಾವು ಬಿಜೆಪಿ ಮತ್ತು ಅದರ ಸಿದ್ಧಾಂತವನ್ನು ಸೋಲಿಸಲಿದ್ದೇವೆ ಎಂದು ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.