ಚೆನೈ : ತಮಿಳುನಾಡಿನಲ್ಲಿ ನಡೆಯುತ್ತಿರುವ ವಲಸೆ ಕಾರ್ಮಿಕರ ಮೇಲಿನ ಹಲ್ಲೆಗೆ ಆಡಳಿತ ಪಕ್ಷ ಡಿಎಂಕೆ ಮತ್ತು ಸಿಎಂ ಸ್ಟಾಲಿನ್ ಕಾರಣ ಎಂದು ಆರೋಪಿಸಿದ್ದ ರಾಜ್ಯ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ವಿರುದ್ಧ ಸೈಬರ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಹಿಂಸಾಚಾರಕ್ಕೆ ಪ್ರಚೋದನೆ ನೀಡುವಂತಹ ಹೇಳಿಕೆ ಕೊಟ್ಟಿದ್ದಾರೆಂದು ಪೊಲೀಸರು ಕೇಸ್ ಹಾಕಿದ್ದಾರೆ. ಇತ್ತೀಚೆಗೆ ಟ್ವಿಟರ್ನಲ್ಲಿ ಹೇಳಿಕೆ ಪ್ರಕಟಿಸಿದ್ದ ಅಣ್ಣಾಮಲೈ, ವಲಸೆ ಕಾರ್ಮಿಕರು ತಮಿಳುನಾಡಿನಲ್ಲಿ ಸುರಕ್ಷಿತವಾಗಿದ್ದಾರೆ.
ಅವರ ಮೇಲೆ ದ್ವೇಷ ಹೆಚ್ಚಾಗಲು ಮುಖ್ಯಮಂತ್ರಿ ಸ್ಟಾಲಿನ್ ನೇತೃತ್ವದ ಡಿಎಂಕೆ ಹಾಗೂ ಮೈತ್ರಿ ಪಕ್ಷದ ನಾಯಕರು ಕಾರಣ ಎಂದು ಆರೋಪಿಸಿದ್ದರು.
ಬಿಹಾರದ ವಲಸೆ ಕಾರ್ಮಿಕರ ನಡುವೆ ತಿರುಪ್ಪೂರ್ನಲ್ಲಿ ನಡೆದ ಗಲಾಟೆ ಹಾಗೂ ಕೊಯಮತ್ತೂರಿನಲ್ಲಿ ಸ್ಥಳೀಯರ ನಡುವೆ ನಡೆದ ಘರ್ಷಣೆಯ ವೀಡಿಯೋ ತುಣುಕನ್ನು ವಲಸೆ ಕಾರ್ಮಿಕರ ಮೇಲೆ ಹಲ್ಲೆ ನಡೆದಿದೆ ಎಂದು ಬಿಂಬಿಸಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಸುದ್ದಿ ಹರಡಲಾಗಿದೆ ಎಂದು ಡಿಜಿಪಿ ಶೈಲೇಂದ್ರ ಬಾಬು ಸ್ಪಷ್ಟಪಡಿಸಿದ್ದಾರೆ.