ಉಡುಪಿ : ತಮಿಳುನಾಡಿನಲ್ಲಿ ಬಿಜೆಪಿ ಆಡಳಿತವಾಗಲಿ, ಶೀಘ್ರದಲ್ಲಿ ಚುನಾವಣೆಯಾಗಲಿ ಇಲ್ಲ. ಆದರೂ ಕೇಂದ್ರದ 43 ಸಚಿವರು ಬಂದು ಹೋಗಿದ್ದಾರೆ. ಕಾಂಗ್ರೆಸ್ನಲ್ಲಿ ಮಾತ್ರ ಚುನಾವಣೆ ಬಂದಾಗ ನಾಯಕರು ಕಾಣಿಸಿಕೊಳ್ಳುತ್ತಾರೆ ಎಂದು ತಮಿಳುನಾಡು ಬಿಜೆಪಿ ಉಪಾಧ್ಯಕ್ಷ ಅಣ್ಣಾಮಲೈ ವಾಗ್ದಾಳಿ ನಡೆಸಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ರಾಜ್ಯಕ್ಕೆ ಮೋದಿ ಹಾಗೂ ಅಮಿತ್ ಶಾ ಭೇಟಿ ವಿಚಾರದ ಟೀಕೆಗೆ ಪ್ರತಿಕ್ರಿಯಿಸಿದ್ದಾರೆ.
ದೇಶದಲ್ಲಿ ಜನ ಕೇಂದ್ರಿತ ಆಡಳಿತ ಇರುವ ಕಾರಣ ಕೇಂದ್ರದ ನಾಯಕರು ಎಲ್ಲಾ ಕಡೆ ಓಡಾಡುತ್ತಿದ್ದಾರೆ. ಕರ್ನಾಟಕದಲ್ಲಿ ಚುನಾವಣೆ ಇಲ್ಲದಿದ್ದರೂ ನಮ್ಮ ಪಕ್ಷದ ನಾಯಕರು ಬರುತ್ತಿದ್ದರು. ಕರ್ನಾಟಕ ದಕ್ಷಿಣ ಭಾರತದಲ್ಲೇ ಅಭಿವೃದ್ಧಿ ಹೊಂದಿದ ರಾಜ್ಯ. ಅತಿ ಹೆಚ್ಚು ಹೂಡಿಕೆ ಡಬಲ್ ಇಂಜಿನ್ ಸರ್ಕಾರದ ಸಾಧನೆ ಎಂದಿದ್ದಾರೆ.
ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಭೇಟಿಯಾಗಲು 5ಲಕ್ಷ ರೂ ನೀಡಬೇಕು. 2014ರ ಹಿಂದೆ ಹಣಕೊಟ್ಟ ದಾಖಲೆ ಇದೆ. ಕಾಂಗ್ರೆಸ್ ಪಕ್ಷ ಒಂದು ಕುಟುಂಬದ ಕೈ ಕೆಳಗೆ ಕಾರ್ಯ ನಿರ್ವಹಿಸುತ್ತಿದೆ. ಕರ್ಮವೀರ ಕಾಮರಾಜರ ಚಿತ್ರವನ್ನು ಕಾಂಗ್ರೆಸ್ ಕೈ ಬಿಟ್ಟಿದೆ. ಕುಟುಂಬ ರಾಜಕಾರಣದಲ್ಲಿ ನಿವೃತ್ತಿ ಅನ್ನೋದು ಇರುವುದಿಲ್ಲ. ಬಾಯಿ ಇರೋದು ಮಾತಾಡಲು ಸುಳ್ಳು ಹೇಳಲು ಅಲ್ಲ ಅನ್ನೋದನ್ನು ಕಾಂಗ್ರೆಸ್ ಕಲಿಯಬೇಕು ಎಂದು ಕಿಡಿಕಾರಿದ್ದಾರೆ.