ಕೊನೆಗೂ ಕ್ಷಮೆ ಕೇಳಿದ ರವೀಂದ್ರ ಗಾಯಕ್ವಾಡ್ ಮೇಲಿನ ನಿಷೇಧ ತೆರವು
ಶನಿವಾರ, 8 ಏಪ್ರಿಲ್ 2017 (06:48 IST)
ನವದೆಹಲಿ: ಏರ್ ಇಂಡಿಯಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ವಿಮಾನ ಯಾನ ಹಾರಾಟಕ್ಕೆ ನಿಷೇಧ ಪಡೆದಿದ್ದ ಶಿವಸೇನೆ ಸಂಸದ ರವೀಂದ್ರ ಗಾಯಕ್ವಾಡ್ ಕೊನೆಗೂ ತಮ್ಮ ಕೃತ್ಯಕ್ಕೆ ಕ್ಷಮೆ ಯಾಚಿಸಿದ್ದಾರೆ.
ಇದರೊಂದಿಗೆ 14 ದಿನಗಳ ನಾಟಕ ಅಂತ್ಯವಾಗಿದ್ದು, ವಿಮಾನ ಹಾರಾಟಕ್ಕೆ ಅವರ ಮೇಲೆ ವಿಧಿಸಿದ್ದ ನಿರ್ಬಂಧ ವಾಪಸ್ ಪಡೆಯಲಾಗಿದೆ. ಕೇಂದ್ರ ನಾಗರಿಕ ವಿಮಾನ ಯಾನ ಸಚಿವ ಅಶೋಕ್ ಗಜಪತಿರಾಜುಗೆ ಕ್ಷಮಾಪಣಾ ಪತ್ರ ಬರೆದ ಗಾಯಕ್ವಾಡ್ ತಮ್ಮ ಕೃತ್ಯಕ್ಕೆ ಕ್ಷಮೆಯಾಚಿಸಿದ್ದಾರೆ.
ಇದರೊಂದಿಗೆ ಕೇಂದ್ರ ಅವರ ಮೇಲೆ ಹೇರಿದ್ದ ನಿಷೇಧ ವಾಪಸ್ ಪಡೆದುಕೊಂಡಿದೆ. ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದಾಗ ಗಾಯಕ್ವಾಡ್ ಡ್ಯೂಟಿ ಮ್ಯಾನೇಜರ್ ಮೇಲೆ ಚಪ್ಪಲಿಯಿಂದ ಹಲ್ಲೆ ನಡೆಸಿದ್ದರು. ಇದರ ನಂತರ ಏರ್ ಇಂಡಿಯಾ ಅಲ್ಲದೆ ದೇಶದ ಎಲ್ಲಾ ವಿಮಾನ ಸಂಸ್ಥೆಗಳು ಅವರ ಹಾರಾಟಕ್ಕೆ ನಿಷೇಧ ಹೇರಿತ್ತು.
ಇದರಿಂದ ಗಾಯಕ್ವಾಡ್ ತೀವ್ರ ಮುಜುಗರಕ್ಕೀಡಾಗಿದ್ದರು. ಅಲ್ಲದೆ ಈ ಸಂಬಂಧ ಲೋಕಸಭೆಯಲ್ಲಿ ಮಾತನಾಡುವಾಗ ಶಿವಸೇನೆ ಸಂಸದರು ಕೇಂದ್ರ ಸರ್ಕಾರದ ಸಚಿವರ ಮೇಲೆ ಹಲ್ಲೆಗೂ ಮುಂದಾಗಿದ್ದರು. ಆದರೆ ವಿಪಕ್ಷ ಕಾಂಗ್ರೆಸ್ ಗಾಯಕ್ವಾಡ್ ಮೇಲಿನ ನಿಷೇಧ ತೆರವನ್ನು ಟೀಕಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ