ನವದೆಹಲಿ : ಕೋವಿಡ್ ಹೊಡೆತದಿಂದ ಅತ್ಯಂತ ಕ್ಷಿಪ್ರಗತಿಯಲ್ಲಿ ಭಾರತದ ಆರ್ಥಿಕತೆ ಚೇತರಿಸಿಕೊಂಡಿರುವ ಹಿನ್ನೆಲೆಯಲ್ಲಿ ದೇಶದ ಸಾರ್ವಭೌಮ ರೇಟಿಂಗ್ ಅನ್ನು ಋುಣಾತ್ಮಕದಿಂದ ಸ್ಥಿರಕ್ಕೆ ಜಾಗತಿಕ ರೇಟಿಂಗ್ ಸಂಸ್ಥೆ ಫಿಚ್ ಏರಿಸಿದೆ.
ಭಾರತದ ಆರ್ಥಿಕ ಪ್ರಗತಿ ಮಧ್ಯಮಾವಧಿಯಲ್ಲಿ ಕುಸಿಯುವಂತಹ ಸಾಧ್ಯತೆ ಕ್ಷೀಣವಾಗಿದೆ ಎಂದು ಬಣ್ಣಿಸಿದೆ.
ಇದೇ ವೇಳೆ, 2022- 23ನೇ ವಿತ್ತೀಯ ವರ್ಷದಲ್ಲಿ ಭಾರತ ಶೇ.7.8ರ ದರದಲ್ಲಿ ಪ್ರಗತಿ ಸಾಧಿಸುವ ಸಾಧ್ಯತೆ ಇದೆ ಎಂದೂ ಹೇಳಿದೆ. ಕಳೆದ ಮಾರ್ಚ್ ನಲ್ಲಿ ಶೇ.8.5ರ ಜಿಡಿಪಿ ಇರಬಹುದು ಎಂದು ಇದೇ ಸಂಸ್ಥೆ ಊಹಿಸಿತ್ತು.
ಕೊರೋನಾದಿಂದ ದೇಶದ ಆರ್ಥಿಕ ಪ್ರಗತಿಯ ಮುನ್ನೋಟ ದುರ್ಬಲವಾಗಿದ್ದು ಹಾಗೂ ಅತ್ಯಧಿಕ ಸಾಲ ಹೊರೆ ಹಿನ್ನೆಲೆಯಲ್ಲಿ 2020ರ ಜೂನ್ನಲ್ಲಿ ಭಾರತದ ರೇಟಿಂಗ್ ಅನ್ನು ಸ್ಥಿರದಿಂದ ಋುಣಾತ್ಮಕಕ್ಕೆ ಫಿಚ್ ಇಳಿಸಿತ್ತು.
ಈ ನಡುವೆ, ಕೇಂದ್ರ ಸರ್ಕಾರ ಕಳೆದ ಮೇ ತಿಂಗಳಿನಲ್ಲಿ ಘೋಷಣೆ ಮಾಡಿದ ತೈಲ ಅಬಕಾರಿ ಸುಂಕ ಕಡಿತ ಹಾಗೂ ಸಬ್ಸಿಡಿ ಹೆಚ್ಚಳದಂತಹ ಕ್ರಮಗಳಿಂದಾಗಿ ದೇಶದ ವಿತ್ತೀಯ ಕೊರತೆ ಶೇ.6.4ರ ಬದಲಿಗೆ ಶೇ.6.8ಕ್ಕೆ ಹೆಚ್ಚಲಿದೆ ಎಂದು ಫಿಚ್ ಹೇಳಿದೆ.
ಜಾಗತಿಕ ಸರಕುಗಳ ಬೆಲೆ ಏರಿಕೆಗಳ ಸಮೀಪದ-ಅವಧಿಯ ಆಘಾತದ ಹೊರತಾಗಿಯೂ ಇದು ಸಾಧ್ಯವಾಗಲಿದೆ' ಎಂದು ಫಿಚ್ ಜೂನ್ 10 ರಂದು ನೀಡಿದ ಹೇಳಿಕೆಯಲ್ಲಿ ತಿಳಿಸಿದೆ.