ಪ್ರಯಾಣಿಕರನ್ನು ಬಿಟ್ಟುಹೋದ ವಿಮಾನ : ಗೋ ಫಸ್ಟ್ಗೆ DGCA ನೋಟಿಸ್

ಬುಧವಾರ, 11 ಜನವರಿ 2023 (07:35 IST)
ನವದೆಹಲಿ: ಸೋಮವಾರ ಬೆಂಗಳೂರಿನಿಂದ ದೆಹಲಿಗೆ ಪ್ರಯಾಣಿಸಬೇಕಿದ್ದ ಗೋ ಫಸ್ಟ್ ವಿಮಾನ ಸುಮಾರು 50ಕ್ಕೂ ಹೆಚ್ಚು ಪ್ರಯಾಣಿಕರನ್ನು ನಿಲ್ದಾಣದಲ್ಲಿಯೇ ಬಿಟ್ಟು ಟೇಕ್ ಆಫ್ ಆಗಿತ್ತು. ಇತ್ತೀಚೆಗೆ ವಿಮಾನಯಾನ ಸಂಸ್ಥೆಯಿಂದಾಗುತ್ತಿರುವ ಹಲವು ತಪ್ಪುಗಳಿಗೆ ವಿಮಾನಯಾನ ನಿಯಂತ್ರಕ ಡಿಜಿಸಿಎ ನೋಟಿಸ್ ಕಳುಹಿಸಿದೆ.

ಒಂದಾದಮೇಲೊಂದರಂತೆ ವಿಮಾನಯಾನ ಸಂಸ್ಥೆಯಿಂದಾಗುತ್ತಿರುವ ತಪ್ಪುಗಳಿಗೆ ಕಾರಣಗಳನ್ನು ನೀಡುವಂತೆ ಡಿಜಿಸಿಎ ನೋಟಿಸ್ ಕಳುಹಿಸಿದೆ. ಇದಕ್ಕೆ ಉತ್ತರಿಸಲು ಸಂಸ್ಥೆಗೆ 2 ವಾರಗಳ ಕಾಲಾವಕಾಶವನ್ನು ನೀಡಿದೆ.

ಸೋಮವಾರ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಗ್ಗೆ 6:30ಕ್ಕೆ ಗೋ ಫಸ್ಟ್ನ ಜಿ8 118 ವಿಮಾನ ದೆಹಲಿಗೆ ಟೇಕ್ ಆಫ್ ಆಗಿತ್ತು. ಆದರೆ 50ಕ್ಕೂ ಹೆಚ್ಚು ಪ್ರಯಾಣಿಕರನ್ನು ವಿಮಾನ ಹತ್ತಿಸಿಕೊಳ್ಳುವುದಕ್ಕಿಂತಲೂ ಮೊದಲೇ ಹಾರಾಟ ಪ್ರಾರಂಭಿಸಿತ್ತು. 

ವರದಿಗಳ ಪ್ರಕಾರ ಸೋಮವಾರ ಬೆಳಗ್ಗೆ ದೆಹಲಿಗೆ ಹೊರಟಿದ್ದ ವಿಮಾನಕ್ಕೆ 4 ಬಸ್ಗಳಲ್ಲಿ ಪ್ರಯಾಣಿಕರನ್ನು ಕರೆದೊಯ್ಯಲಾಗಿತ್ತು. ಪ್ರಯಾಣಿಕರು ತಮ್ಮ ಬೋರ್ಡಿಂಗ್ ಪಾಸ್ಗಳನ್ನು ಪಡೆದಿದ್ದು, ತಮ್ಮ ಲಗೇಜ್ಗಳನ್ನೂ ಪರಿಶೀಲಿಸಲಾಗಿತ್ತು. 3 ಬಸ್ಗಳಲ್ಲಿ ತೆರಳಿದ್ದ ಪ್ರಯಾಣಿಕರನ್ನು ವಿಮಾನ ಹತ್ತಿಸಿಕೊಂಡು ಟೇಕ್ ಆಫ್ ಆಗಿತ್ತು. ಆದರೆ ಒಂದು ಬಸ್ ನಿಲ್ದಾಣದಲ್ಲಿಯೇ ಉಳಿದುಹೋಗಿತ್ತು. ವಿಮಾನ ತಮ್ಮನ್ನು ಬಿಟ್ಟು ಹೋಗಿದ್ದನ್ನು ತಿಳಿದ ಕೆಲ ಪ್ರಯಾಣಿಕರು ಸಾಮಾಜಿಕ ಮಾಧ್ಯಮಗಳಲ್ಲಿ ಸಂಸ್ಥೆ ನಿರ್ಲಕ್ಷ್ಯವಹಿಸಿದೆ ಎಂದು ಕಿಡಿ ಕಾರಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ