ನೋಡ ನೋಡುತ್ತಿದ್ದಂತೆ ನದಿಗೆ ಕುಸಿದ ಪೊಲೀಸ್ ಠಾಣೆ
ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಅಸ್ಸಾಂನ 30ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿದೆ. ತಗ್ಗು ಪ್ರದೇಶಗಳ ಜನರು ಪ್ರವಾಹದಲ್ಲಿ ಸಿಲುಕಿ ಪ್ರಾಣ ಕಳೆದುಕೊಂಡಿದ್ದಾರೆ.
ಅಸ್ಸಾಂನಲ್ಲಿ ಹಿಂದೆಂದೂ ಕಾಣದಂತಹ ಭಾರೀ ಮಳೆಯಿಂದಾಗಿ ನದಿಗಳು, ತೊರೆಗಳು ತುಂಬಿ ಹರಿಯುತ್ತಿವೆ.ಬ್ರಹ್ಮಪುತ್ರ ನದಿಯಲ್ಲಿ ನೀರು ಅಪಾಯದ ಮಟ್ಟ ಮೀರಿ ಹರಿದಿದ್ದು, ಅಲ್ಲಿನ ಪೊಲೀಸ್ ಠಾಣೆಯೊಂದು ನದಿಯಲ್ಲಿ ಕುಸಿದು ಬಿದ್ದಿದೆ.
ಸುತ್ತಮುತ್ತಲಿನ ಜನರನ್ನು ಅಧಿಕಾರಿಗಳು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದ್ದಾರೆ. ನಲ್ಬರಿ ಜಿಲ್ಲೆಯಲ್ಲಿ ನದಿಗೆ ಹೊಂದಿಕೊಂಡಂತೆ ಪೊಲೀಸ್ ಠಾಣೆಯ ಕಟ್ಟಡವಿದ್ದು, ಭಾರೀ ಪ್ರವಾಹದಿಂದಾಗಿ ನೋಡನೊಡುತ್ತಿದ್ದಂತೆ ಎರಡು ಅಂತಸ್ತಿನ ಕಟ್ಟಡದ ಅರ್ಧ ಭಾಗ ಮುಳುಗಡೆಯಾಗಿದೆ. ಕಟ್ಟಡ ನದಿಗೆ ಬೀಳುತ್ತಿರುವ ದೃಶ್ಯಗಳನ್ನು ಗ್ರಾಮಸ್ಥರು ತಮ್ಮ ಫೋನ್‌ಗಳಲ್ಲಿ ಸೆರೆ ಹಿಡಿದಿದ್ದಾರೆ. ಆ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.