ಭಾರತಕ್ಕೆ ಭೇಟಿ ನೀಡುವ ವಿದೇಶಿ ಪ್ರವಾಸಿಗಳು ಆಗ್ರಾ ನಗರದಲ್ಲಿ ಸಂಜೆ ವೇಳೆ ಸುತ್ತಾಡುವಾಗ ಸ್ಕರ್ಟ್‌ಗಳನ್ನು ಧರಿಸುವುದನ್ನು ತಪ್ಪಿಸಬೇಕೆಂದು, ರಾತ್ರಿ ಒಂಟಿಯಾಗಿ ಅಡ್ಡಾಡಬಾರದೆಂದು ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಮಹೇಶ್ ಶರ್ಮಾ ಸಲಹೆ ನೀಡುವ ಮೂಲಕ ತಪ್ಪು ಹೆಜ್ಜೆ ಇರಿಸಿದ್ದಾರೆ.
ವಿದೇಶಿ ಪ್ರವಾಸಿಗಳ ಸಹಾಯಹಸ್ತಕ್ಕೆ ಸಹಾಯವಾಣಿ ಸಂಖ್ಯೆ 1363ರನ್ನು ಜಾರಿಗೆ ತಂದಿರುವ ಕುರಿತು ಶರ್ಮಾ ವಿವರಿಸುತ್ತಾ, ವಿದೇಶಿ ಪ್ರವಾಸಿ ಏರ್‌ಪೋರ್ಟ್ ಮುಟ್ಟಿದಾಗ ಅವರಿಗೆ ವೆಲ್‌ಕಮ್ ಕಿಟ್ ನೀಡಲಾಗುತ್ತದೆ. ಅದರಲ್ಲಿ ಭಾರತದಲ್ಲಿ ತಂಗಿರುವ ಅವಧಿಯಲ್ಲಿ ಮಾಡಬೇಕಾದ್ದನ್ನು, ಮಾಡಬಾರದ್ದನ್ನು ಸೂಚಿಸಲಾಗಿದೆ ಎಂದು ಶರ್ಮಾ ಹೇಳಿದರು.
ಆದಾಗ್ಯೂ, ಪತ್ರಕರ್ತರೊಬ್ಬರು ಶರ್ಮಾರನ್ನು ಈ ಕುರಿತು ಸಮರ್ಥನೆ ಕೇಳಿದಾಗ, ತಮ್ಮ ಅಭಿಪ್ರಾಯವನ್ನು ತಿದ್ದಿಕೊಂಡ ಸಚಿವರು, ಯಾವುದೇ ಪ್ರವಾಸಿಗೆ ವಸ್ತ್ರಸಂಹಿತೆಯನ್ನು ಸಲಹೆ ಮಾಡುವ ಇಚ್ಛೆ ತಮಗಿಲ್ಲ . ಧಾರ್ಮಿಕ ಸ್ಥಳಗಳ ಭೇಟಿಗೆ ಸಂಬಂಧಿಸಿದಂತೆ ಸಲಹೆ ನೀಡಲಾಗಿದೆ ಎಂದು ಸ್ಪಷ್ಟೀಕರಣ ನೀಡಿದರು.
ಕಳೆದ ವರ್ಷ ಕೂಡ ಶರ್ಮಾ ಯುವತಿಯರು ನೈಟ್ ಔಟ್ ಬಯಸುವುದು ಭಾರತದಲ್ಲಿ ಸ್ವೀಕಾರಾರ್ಹವಲ್ಲ ಎಂದು ಹೇಳುವ ಮೂಲಕ ವಿವಾದದ ಕಿಡಿ ಹೊತ್ತಿಸಿದ್ದರು. ಶರ್ಮಾ ಕಾಮೆಂಟ್‌ಗೆ ಟ್ವಿಟರ್‌ನಲ್ಲಿ ಟೀಕೆಗಳು ಹೊರಹೊಮ್ಮಿ, ಇದು ದೇಶದಲ್ಲಿ ದೌರ್ಜನ್ಯ ಮತ್ತು ರೇಪ್ ತಡೆಯಲು ನೆರವಾಗುತ್ತದಾ ಎಂದು ಕೆಲವರು ಪ್ರಶ್ನಿಸಿದ್ದರು.