ಹೈದರಾಬಾದ್: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್ ಅವರು ರಾಜಕೀಯದಲ್ಲಿ ಹೊಸ ಇನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆ.
ಕಾಂಗ್ರೆಸ್ ನಾಯಕ ಮೊಹಮ್ಮದ್ ಅಜರುದ್ದೀನ್ ಅವರು ಶೀಘ್ರದಲ್ಲೇ ತೆಲಂಗಾಣ ಸಚಿವ ಸಂಪುಟಕ್ಕೆ ಸೇರ್ಪಡೆಗೊಳ್ಳುವ ಸಾಧ್ಯತೆಯಿದೆ ಎಂದು ಪಕ್ಷದ ಆಂತರಿಕ ಮೂಲಗಳು ತಿಳಿಸಿವೆ. ಅಲ್ಪಸಂಖ್ಯಾತರ ಮತಗಳು ನಿರ್ಣಾಯಕ ಪಾತ್ರವನ್ನು ವಹಿಸುವ ನಿರೀಕ್ಷೆಯಿರುವ ಜೂಬಿಲಿ ಹಿಲ್ಸ್ ಉಪಚುನಾವಣೆಯ ನಡುವೆ ಈ ಕ್ರಮ ಕೈಗೊಳ್ಳಲಾಗಿದೆ.
ಆಗಸ್ಟ್‌ನಲ್ಲಿ ರಾಜ್ಯಪಾಲರ ಕೋಟಾದಡಿ ಎಂಎಲ್‌ಸಿಯಾಗಿ ನಾಮನಿರ್ದೇಶನಗೊಂಡಿದ್ದ ಅಜರುದ್ದೀನ್ ಅವರನ್ನು ಸೇರ್ಪಡೆಗೊಳಿಸುವ ಪ್ರಸ್ತಾವನೆಗೆ ಅಖಿಲ ಭಾರತ ಕಾಂಗ್ರೆಸ್ ಸಮಿತಿಯಿಂದ ಅನುಮೋದನೆ ದೊರೆತಿದೆ ಎಂದು ಮೂಲಗಳು ತಿಳಿಸಿವೆ.
ಪ್ರಮಾಣ ವಚನ ಸಮಾರಂಭವು ನಾಳೆ (ಶುಕ್ರವಾರ) ನಡೆಯುವ ಸಾಧ್ಯತೆಯಿದೆ. ರಾಜ್ಯಪಾಲರು ಅವರ ನೇಮಕಾತಿಯನ್ನು ಇನ್ನೂ ಖಚಿತಗೊಳಿಸಿಲ್ಲ.
ತೆಲಂಗಾಣ ಸಚಿವ ಸಂಪುಟದಲ್ಲಿ ಮುಖ್ಯಮಂತ್ರಿ ರೇವಂತ್ ರೆಡ್ಡಿ ಸೇರಿ 15 ಸದಸ್ಯರಿದ್ದು, ಅಲ್ಪಸಂಖ್ಯಾತ ಸಮುದಾಯಕ್ಕೆ ಯಾವುದೇ ಪ್ರಾತಿನಿಧ್ಯವಿಲ್ಲ. ನಿಯಮಗಳ ಪ್ರಕಾರ ಸಂಪುಟದಲ್ಲಿ ಇನ್ನೂ ಮೂವರಿಗೆ ಅವಕಾಶವಿದೆ. ಒಂದು ವೇಳೆ ಅಜರುದ್ದೀನ್ ಅವರು ಸಂಪುಟಕ್ಕೆ ಸೇರ್ಪಡೆಯಾದರೆ, ರೇವಂತ ರೆಡ್ಡಿ ಅವರ ಸಚಿವ ಸಂಪುಟದಲ್ಲಿ ಅಲ್ಪಸಂಖ್ಯಾತ ಸಮುದಾಯದ ಮೊದಲ ಸಚಿವರಾಗಿರಲಿದ್ದಾರೆ.
ಮುಸ್ಲಿಂ ಸಚಿವರನ್ನು ನೇಮಕ ಮಾಡುವುದರಿಂದ ಕಾಂಗ್ರೆಸ್‌ನ ಸ್ಥಾನವನ್ನು ವಿಶೇಷವಾಗಿ 1 ಲಕ್ಷಕ್ಕೂ ಹೆಚ್ಚು ಮುಸ್ಲಿಂ ಮತದಾರರನ್ನು ಹೊಂದಿರುವ ಜುಬಿಲಿ ಹಿಲ್ಸ್‌ನಲ್ಲಿ ಬಲಪಡಿಸಬಹುದು ಎಂದು ಪಕ್ಷದ ಮುಖಂಡರ ಲೆಕ್ಕಾಚಾರ. ಈ ವರ್ಷದ ಜೂನ್‌ನಲ್ಲಿ ಬಿಆರ್‌ಎಸ್ ಶಾಸಕ ಮಾಗಂಟಿ ಗೋಪಿನಾಥ್ ನಿಧನರಾದ ಹಿನ್ನೆಲೆಯಲ್ಲಿ ಉಪಚುನಾವಣೆ ಘೋಷಣೆಯಾಗಿದೆ.