ದೆಹಲಿ ವಿಧಾನಸಭೆಯಲ್ಲಿ ಕಪಿಲ್ ಮಿಶ್ರಾ ಮೇಲೆ ಹಲ್ಲೆ

ಬುಧವಾರ, 31 ಮೇ 2017 (15:48 IST)
ನವದೆಹಲಿ:ಮೇ-31: ಆಮ್ ಆದ್ಮಿ ಪಕ್ಷದ ಬಂಡಾಯ ಶಾಸಕ ಹಾಗೂ ಮಾಜಿ ಸಚಿವ ಕಪಿಲ್ ಮಿಶ್ರಾ ಮೇಲೆ ಆಪ್ ಶಾಸಕರು ದೆಹಲಿ ವಿಧಾನಸಭೆಯ ಒಳಗೆ ಹಲ್ಲೆ ನಡೆಸಿದ ಘಟನೆ ನಡೆದಿದೆ.
 
ಜಿಎಸ್ ಟಿ ಮಸೂದೆ ಕುರಿತು ಚರ್ಚಿಸಲು ಇಂದು ದೆಹಲಿ ವಿಧಾನಸಭೆ ವಿಶೇಷ ಅಧಿವೇಶನ ಕರೆಯಲಾಗಿದ್ದು, ಕಲಾಪ ಆರಂಭವಾಗುತ್ತಿದ್ದಂತೆ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ವಿರುದ್ಧ ಘೋಷಣೆ ಕೂಗಲು ಯತ್ನಿಸಿದ ಕಪಿಲ್ ಮಿಶ್ರಾ ಮೇಲೆ ಆಪ್ ಶಾಸಕರು ಹಲ್ಲೆ ನಡೆಸಿದ್ದಾರೆ. ಈ ವೇಳೆ ಪ್ರತಿಪಕ್ಷ ಸದಸ್ಯರು ಮಿಶ್ರಾ ರಕ್ಷಣೆಗೆ ಧಾವಿಸಿದ್ದಾರೆ.
 
ವಿಧಾನಸಭೆಯಲ್ಲಿ ಆಡಳಿತ, ಪ್ರತಿಪಕ್ಷಗಳ ಹಾಗೂ ಭಿನ್ನಮತಿಯ ಶಾಸಕರ ನಡುವೆ ಭಾರಿ ಹೈಡ್ರಾಮಾ ನಡೆದ ನಂತರ ಕಪಿಲ್ ಮಿಶ್ರಾ ಅವರನ್ನು ಮಾರ್ಷೆಲ್ ಗಳ ಮೂಲಕ ಸದನದಿಂದ ಹೊರ ಹಾಕಲಾಯಿತು. 
 
ಹಲ್ಲೆ ಬಳಿಕ ಮಾತನಾಡಿದ ಕಪಿಲ್ ಮಿಶ್ರಾ, ಆಮ್ ಆದ್ಮಿ ಪಕ್ಷದ ನಾಲ್ಕೈದು ಶಾಸಕರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ನನಗೆ ಕಾಲಿನಿಂದ ಒದ್ದಿದ್ದಾರೆ. ಶಾಸಕರು ನನ್ನ ಮೇಲೆ ಹಲ್ಲೆ ನಡೆಸುತ್ತಿದ್ದರೆ, ಅರವಿಂದ್ ಕೇಜ್ರಿವಾಲ್ ಅವರು ಅದನ್ನು ನೋಡಿ ನಗುತ್ತಿದ್ದರು... ಉಪ ಮುಖ್ಯಮಂತ್ರಿ ಮನಿಶ್ ಸಿಸೋಡಿಯಾ ಸೂಚನೆ ಮೆರೆಗೆ ಶಾಸಕರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಆದರೆ ನಾನು ಇದಕ್ಕೆಲ್ಲಾ ಹೆದರುವುದಿಲ್ಲ ಎಂದು ಗುಡುಗಿದ್ದಾರೆ.
 

ವೆಬ್ದುನಿಯಾವನ್ನು ಓದಿ