ನಮ್ಮ ಮೆಟ್ರೊ ಹಳದಿ ಮಾರ್ಗ ಲೋಕಾರ್ಪಣೆಗೆ ದಿನಗಣನೆ: ಪ್ರಧಾನಿ ಮೋದಿಯಿಂದ ಗ್ರೀನ್‌ಸಿಗ್ನಲ್‌

Sampriya

ಭಾನುವಾರ, 3 ಆಗಸ್ಟ್ 2025 (11:02 IST)
Photo Credit X
ಬೆಂಗಳೂರು: ಬಹುನಿರೀಕ್ಷಿತ ನಮ್ಮ ಮೆಟ್ರೊ ಹಳದಿ ಮಾರ್ಗಯಲ್ಲಿ ಮೆಟ್ರೊ ರೈಲು ಸಂಚಾರಕ್ಕೆ ದಿನಗಣನೆ ಆರಂಭವಾಗಿದೆ. ಇದೇ 10ರಂದು ಪ್ರಧಾನಿ ನರೇಂದ್ರ ಮೋದಿ ಅವರು ಗ್ರೀನ್‌ಸಿಗ್ನಲ್‌ ನೀಡಲಿದ್ದಾರೆ. 

ಆರ್‌.ವಿ. ರಸ್ತೆಯಿಂದ ಬೊಮ್ಮಸಂದ್ರ ನಡುವಿನ ನಮ್ಮ ಮೆಟ್ರೊ ಹಳದಿ ಮಾರ್ಗದಲ್ಲಿ ರೈಲು ಸಂಚಾರ ಮಾಡಲಿದೆ. ನಮ್ಮ ಮೆಟ್ರೊ ಹಳದಿ ಮಾರ್ಗದಲ್ಲಿ ರೈಲು ಸಂಚಾರದಿಂದ ಸುಮಾರು 8 ಲಕ್ಷ ಪ್ರಯಾಣಿಕರಿಗೆ ಅನುಕೂಲವಾಗಲಿವೆ. 

ಇದು ಸಿಲ್ಕ್ ಬೋರ್ಡ್ ಸಂಚಾರ ದಟ್ಟಣೆ ಸಮಸ್ಯೆಯನ್ನು ಬಹುಮಟ್ಟಿಗೆ ಪರಿಹರಿಸಲಿದೆ. ಸಾರ್ವಜನಿಕ ಸಾರಿಗೆ ಬಳಕೆ ಮಾತ್ರವೇ ಸಂಚಾರ ದಟ್ಟಣೆ ಇಳಿಕೆಗೆ ಉತ್ತಮ ಪರಿಹಾರವಾಗಿದೆ.

ಆರ್‌.ವಿ. ರಸ್ತೆಯಿಂದ ಬೊಮ್ಮಸಂದ್ರ ಸಂಪರ್ಕಿಸುವ ಈ ಮಾರ್ಗದಲ್ಲಿ ಸಂಚಾರ ಆರಂಭಿಸಲು ರೈಲ್ವೆಯ ಮೆಟ್ರೊ ರೈಲು ಸುರಕ್ಷತಾ ಆಯೋ ಅನುಮತಿ ನೀಡಿದೆ. ಮೆಟ್ರೊ ರೈಲು ಸುರಕ್ಷತೆ ದಕ್ಷಿಣ ವೃತ್ತದ ಆಯುಕ್ತ ಅನಂತ್‌ ಮಧುಕರ್‌ ಚೌಧರಿ ನೇತೃತ್ವದ ತಂಡವು ಜುಲೈ 22ರಿಂದ 25ರವರೆಗೆ ವಿವಿಧ ಪರೀಕ್ಷೆಗಳನ್ನು ನಡೆಸಿತ್ತು.

19.15 ಕಿ.ಮೀ ಉದ್ದದ ಹಳದಿ ಮಾರ್ಗಕ್ಕೆ ಈಗಾಗಲೇ ಮೂರು ರೈಲುಗಳು ಬಂದಿವೆ. ಪಶ್ಚಿಮ ಬಂಗಾಳದ ಟಿಟಾಗಢ ರೈಲ್ ಸಿಸ್ಟಂ ಲಿಮಿಟೆಡ್‌ ಕಾರ್ಯಾಗಾರದಿಂದ ನಾಲ್ಕನೇ ರೈಲು ಕಳುಹಿಸಿದ್ದು, ಅದು ಆಗಸ್ಟ್‌ 10ರ ಒಳಗೆ ಬೆಂಗಳೂರು ತಲುಪಲಿದೆ. 

ಹಳದಿ ಮಾರ್ಗ ಉದ್ಘಾಟನೆ ಕುರಿತು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವ ಮನೋಹರ್‌ ಲಾಲ್‌ ಖಟ್ಟರ್‌ ಹಾಗೂ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ