ಪಣಜಿ: ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಭಾಗಿಯಾಗಲು ಈ ರಾಜ್ಯ ಸಾರ್ವಜನಿಕರಿಗೆ ಉಚಿತ ರೈಲಿನ ವ್ಯವಸ್ಥೆ ಮಾಡಿದೆ. ಈ ಬಗ್ಗೆ ಸ್ವತಃ ಮುಖ್ಯಮಂತ್ರಿಗಳೇ ಘೋಷಣೆ ಮಾಡಿದ್ದಾರೆ.
ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಸಾಕಷ್ಟು ಜನ ದೇಶದ ನಾನಾ ಭಾಗಗಳಿಂದ ಭಾಗಿಯಾಗುತ್ತಿದ್ದಾರೆ. ಕುಂಭಮೇಳಕ್ಕೆ ಹೋಗುವವರ ಸಂಖ್ಯೆ ಹೆಚ್ಚಾಗಿರುವುದರಿಂದ ವಿಮಾನ ಪ್ರಯಾಣ ದುಬಾರಿಯಾಗಿದೆ.
ಇನ್ನು ರೈಲುಗಳಲ್ಲಿ ಕಾಲು ಹಾಕಲೂ ಸ್ಥಳವಿಲ್ಲದಷ್ಟು ರಶ್ ಇದೆ. ಹೀಗಾಗಿ ಕುಂಭಮೇಳಕ್ಕೆ ಹೋಗಬೇಕೆಂದರೂ ಕೆಲವರಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಅಂತಹವರಿಗಾಗಿ ಗೋವಾ ಸರ್ಕಾರ ಉಚಿತ ರೈಲಿನ ವ್ಯವಸ್ಥೆ ಮಾಡಿಕೊಟ್ಟಿದೆ.
ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ತಮ್ಮ ರಾಜ್ಯದಲ್ಲಿ ಪ್ರಯಾಗ್ ರಾಜ್ ಗೆ ತೆರಳುವವರಿಗಾಗಿ ಮೂರು ಉಚಿತ ರೈಲಿನ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಇಂದು ಬೆಳಿಗ್ಗೆ ಮೊದಲ ಟ್ರೈನ್ ಪ್ರಯಾಗ್ ರಾಜ್ ನತ್ತ ಪ್ರಯಾಣ ಬೆಳೆಸಿದೆ. ಇನ್ನು ಫೆಬ್ರವರಿ 13 ಮತ್ತು 21 ರಂದು ಬೆಳಿಗ್ಗೆ 8 ಗಂಟೆಗೆ ಗೋವಾದ ಮಾರ್ಗೋವಾ ನಿಲ್ದಾಣದಿಂದ ರಯಲು ಹೊರಡಲಿದೆ. ಈ ರೈಲು ಸುಮಾರು 1,000 ಜನರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಒಂದು ದಿನ ಪ್ರಯಾಗ್ ರಾಜ್ ನಲ್ಲಿದ್ದು ಮರಳಿ ಬರಲು ವ್ಯವಸ್ಥೆ ಮಾಡಲಾಗಿದೆ.