ಗೋರಕ್ಷಕರು ಕಾನೂನಿನಡಿ ಕಾರ್ಯ ನಿರ್ವಹಿಸುತ್ತಿದ್ದಾರೆ: ಮೋಹನ್ ಭಾಗ್ವತ್
ಬುಧವಾರ, 12 ಅಕ್ಟೋಬರ್ 2016 (16:44 IST)
ವಿವಾದಕ್ಕೀಡಾಗಿರುವ ಗೋ ರಕ್ಷಕರ ಬೆನ್ನಿಗೆ ನಿಂತಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗ್ವತ್, ಗೋರಕ್ಷಕರು ಕಾನೂನಿನಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದಿದ್ದಾರೆ.
ರಾಷ್ಟ್ರೀಯ ಸ್ವಯಂ ಸೇವಾ ಸಂಘದ 91 ನೇ ಸ್ಥಾಪನಾ ದಿನದಂದು ರೇಶಿಮಭಾಗ್ ಮೈದಾನದಲ್ಲಿ ವಾರ್ಷಿಕ ವಿಜಯದಶಮಿ ಭಾಷಣ ಮಾಡುತ್ತಿದ್ದ ಭಾಗ್ವತ್, "ಕೆಲವು ಜನರು ಗೋ ರಕ್ಷಣೆಗಾಗಿ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ಇದು ರಾಜ್ಯದ ನೀತಿ ನಿಯಮಗಳ ಭಾಗವಾಗಿದೆ ", ಎಂದಿದ್ದಾರೆ.
ವಿವಿಧ ರಾಜ್ಯಗಳಲ್ಲಿ ಗೋ ರಕ್ಷಕ ಕಾನೂನುಗಳಿವೆ. ಗೋ ರಕ್ಷಕರು ಕಾನೂನಿನ ವ್ಯಾಪ್ತಿಯಲ್ಲೇ ಕೆಲಸ ಮಾಡುತ್ತಿದ್ದಾರೆ. ಕಾನೂನನ್ನು ಮೀರಿ ನಡೆದವರನ್ನು ಗೋ ರಕ್ಷಕರಿಗೆ ಹೋಲಿಸಬಾರದು ಎಂಬುದನ್ನು ಆಡಳಿತ ಗಮನದಲ್ಲಿಟ್ಟುಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರನೆಲೆಗಳ ಮೇಲೆ ನಡೆಸಿದ ಸೀಮಿತ ದಾಳಿಗೆ ಬೆಂಬಲ ವ್ಯಕ್ತ ಪಡಿಸಿರುವ ಭಾಗ್ವತ್, ಭಾರತದ ತಾಳ್ಮೆಯನ್ನು ಪರೀಕ್ಷಿಸಬೇಡಿ ಎಂದು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ.
ಪಾಕಿಸ್ತಾನ, ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳನ್ನು ಎತ್ತಿ ಕಟ್ಟುತ್ತಿದೆ ಎಂದು ಕಿಡಿಕಾರಿರುವ ಅವರು, ಕಣಿವೆ ನಾಡಿನಲ್ಲಿ ಹಿಂಸಾಚಾರದಲ್ಲಿ ತೊಡಗಿರುವ ಜನರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಮೀರ್ಪುರ್, ಮುಜಪ್ಫರಾಬಾದ್, ಗಿಲ್ಜಿತ್- ಬಲ್ಚಿಸ್ತಾನ್ ಸೇರಿದಂತೆ ಸಂಪೂರ್ಣ ಕಾಶ್ಮೀರ ಭಾರತದ್ದು ಎಂದು ಅವರು ಪಾಕಿಸ್ತಾನಕ್ಕೆ ಸಂದೇಶ ರವಾನಿಸಿದ್ದಾರೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘ 1925, ಸೆಪ್ಟೆಂಬರ್ ತಿಂಗಳಲ್ಲಿ ಕೇಶವ್ ಬಲಿರಾಮ್ ಹೆಗ್ಡೇವಾರ್ ಅವರಿಂದ ಸ್ಥಾಪಿಸಲ್ಪಟ್ಟಿತ್ತು. ಪ್ರತಿವರ್ಷ ದಸರಾ ದಿನದಂದು ಸಂಘದ ಸ್ಥಾಪನಾ ದಿನವನ್ನಾಚರಿಸಲಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ