ಗೋಧಿ ರಫ್ತಿಗೆ ಕೇಂದ್ರ ನಿರ್ಬಂಧ
ಗೋಧಿ ದರ ಗಗನಮುಖಿಯಾಗುತ್ತಿರುವ ಬೆನ್ನಲ್ಲೇ ಕೇಂದ್ರ ಸರಕಾರ ಗೋಧಿ ರಫ್ತನ್ನು ತತ್ ಕ್ಷಣದಿಂದಲೇ ಜಾರಿಗೆ ಬರುವಂತೆ ನಿರ್ಬಂಧಿಸಿದೆ.
ಜಗತ್ತಿನಲ್ಲೇ ಅತೀ ಹೆಚ್ಚು ಗೋಧಿ ಉತ್ಪಾದಿಸುವ ಎರಡನೇ ದೇಶವಾಗಿರುವ ಭಾರತದಲ್ಲಿ ಗೋಧಿ ದರ ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಏರಿರುವ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಶನಿವಾರ ಈ ಆದೇಶ ಹೊರಡಿಸಿದೆ.
ಗೋಧಿ ದರ ಕೆಜಿಗೆ 34ರಿಂದ 35 ರೂ. ತಲುಪಿದ್ದು, 14 ವರ್ಷಗಳಲ್ಲೇ ಗರಿಷ್ಠ ಪ್ರಮಾಣಕ್ಕೆ ಜಿಗಿತ ಕಂಡಿದೆ. ಸಾಮಾನ್ಯ ದರಕ್ಕಿಂತ ಶೇ.15ರಿಂದ 20ರಷ್ಟು ಏರಿಕೆಯಾಗಿದೆ.
ಗೋಧಿಯ ರಫ್ತಿಗೆ ಈಗಾಗಲೇ ಅನುಮತಿ ಪಡೆದು ಮುಂಗಡ ಹಣ ಪಡೆದಿದ್ದರೆ ಮಾತ್ರ ರಫ್ತು ಮಾಡಬಹುದಾಗಿದ್ದು, ಯಾವುದೇ ಹೊಸ ಆರ್ಡರ್ ಪಡೆದು ರಫ್ತು ಮಾಡುವಂತಿಲ್ಲ ಎಂದು ಕೇಂದ್ರ ಸರಕಾರ ಆದೇಶದಲ್ಲಿ ವಿವರಿಸಿದೆ.
ಕಪ್ಪು ಸಮುದ್ರದಲ್ಲಿ ರಷ್ಯಾ ಮತ್ತು ಉಕ್ರೇನ್ ಯುದ್ಧ ಮುಂದುವರಿದಿರುವ ಹಿನ್ನೆಲೆಯಲ್ಲಿ ರಫ್ತು ಸಾಗಾಟಕ್ಕೆ ಅಡ್ಡಿಯಾಗಿರುವುದರಿಂದ ಗೋಧಿ ದರ ಸತತವಾಗಿ ಏರಿಕೆ ಕಾಣುತ್ತಲೇ ಇದೆ. ಅದರಲ್ಲೂ ಯುರೋಪ್ ದೇಶಗಳಲ್ಲಿ ಬೇಡಿಕೆ ಹೆಚ್ಚಾಗಿದೆ.