ಉದಯಪುರ: ಸತತ 2 ಲೋಕಸಭಾ ಸೋಲು, ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ ಸರಣಿ ಸೋಲಿನಿಂದ ಎಚ್ಚೆತ್ತುಕೊಂಡಿರುವ ಕಾಂಗ್ರೆಸ್, ಶುಕ್ರವಾರದಿಂದ ಇಲ್ಲಿ ಆರಂಭವಾದ ಪಕ್ಷದ 3 ದಿನದ ಚಿಂತನ ಶಿಬಿರದಲ್ಲಿ ಒಂದು ಕುಟುಂಬ, ಒಂದು ಟಿಕೆಟ್, ಪಕ್ಷದ ವಿವಿಧ ಹುದ್ದೆಗಳಿಗೆ ಆಯ್ಕೆ ಮಾಡುವ ವೇಳೆ ವಯೋಮಿತಿ ನಿಗದಿ, ಎಲ್ಲಾ ಹಂತದಲ್ಲಿ ಯುವಕರಿಗೆ ಹೆಚ್ಚಿನ ಆದ್ಯತೆ ನೀಡುವ ಹಲವು ಮಹತ್ವದ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ.
ಕಾಂಗ್ರೆಸ್ ಪಕ್ಷದಲ್ಲಿ ವಂಶಪಾರಂಪರ್ಯ ರಾಜಕೀಯ ನಡೆಸಲಾಗುತ್ತಿದೆ ಎಂಬ ಬಿಜೆಪಿ ಆರೋಪಕ್ಕೆ ತಿರುಗೇಟು ನೀಡಲು ಪಕ್ಷ ಈ ಕ್ರಮ ಕೈಗೊಳ್ಳುತ್ತಿದೆ. ಆದರೆ ಪಕ್ಷದಲ್ಲಿ ಕನಿಷ್ಠ 5 ವರ್ಷ ಕಾಲ ಅಪ್ರತಿಮ ಸೇವೆ ಸಲ್ಲಿಸಿದವರಿಗೆ ಒಂದು ಕುಟುಂಬ, ಒಂದು ಟಿಕೆಟ್ ನೀತಿಯಿಂದ ವಿನಾಯ್ತಿ ಸಿಗಲಿದ್ದು, ಇಂಥವರು ಒಂದೇ ಕುಟುಂಬದಲ್ಲಿದ್ದರೂ ಟಿಕೆಟ್ ಗಿಟ್ಟಿಸಬಹುದಾಗಿದೆ.
ಇದೇ ವೇಳೆ, 50-60 ವರ್ಷದಿಂದ ನಿಂತ ನೀರಾಗಿದ್ದ ಪಕ್ಷ ಸಂಘಟನೆಯಲ್ಲಿ ವ್ಯಾಪಕ ಬದಲಾವಣೆ ತರಲು ಚಿಂತನೆ ನಡೆಸಲಾಗಿದೆ. ಈಗಿರುವ ಬೂತ್ ಹಾಗೂ ಬ್ಲಾಕ್ ಮಟ್ಟದ ಸಮಿತಿಗಳ ಮಧ್ಯದಲ್ಲಿ ಮಂಡಲ ಕಮಿಟಿಗಳನ್ನು ರಚಿಸುವ ಪರಿಶೀಲನೆ ನಡೆದಿದೆ. ಯುವಕರಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಪಕ್ಷದ ಎಲ್ಲ ಕಮಿಟಿಗಳಲ್ಲಿ 50 ವರ್ಷಕ್ಕಿಂತ ಕೆಳಗಿರುವವರಿಗೆ ಆದ್ಯತೆ ನೀಡಲಾಗುತ್ತದೆ.