ಸರ್ಕಾರಿ ಶಾಲೆಗಳು ಕಸದ ರಾಶಿಗಿಂತಲೂ ಕೆಟ್ಟದಾಗಿವೆ : ಕೇಜ್ರಿವಾಲ್
ಗುರುವಾರ, 8 ಸೆಪ್ಟಂಬರ್ 2022 (08:12 IST)
ನವದೆಹಲಿ : ದೇಶದಲ್ಲಿ ಶೇ.80ಕ್ಕೂ ಹೆಚ್ಚಿನ ಸರ್ಕಾರಿ ಶಾಲೆಗಳು ಕಸದ ರಾಶಿಗಿಂತಲೂ ಕೆಟ್ಟ ಪರಿಸ್ಥಿತಿಯಲ್ಲಿದೆ ಎಂದು ಆರೋಪಿಸಿ, ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಬುಧವಾರ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.
ನರೇಂದ್ರ ಮೋದಿಯವರು ದೇಶದಲ್ಲಿ 14,500 ಶಾಲೆಗಳನ್ನು ಆಧುನೀಕರಿಸುವ ನಿರ್ಧಾರದ ಬಗ್ಗೆ ಟೀಕಿಸಿದ ಕೇಜ್ರಿವಾಲ್ ಅದನ್ನು ಸಾಗರದಲ್ಲಿನ ಹನಿ ನೀರಿಗೆ ಸಮ ಎಂಬಂತೆ ಬಣ್ಣಿಸಿದ್ದಾರೆ ಹಾಗೂ ದೇಶದ ಎಲ್ಲಾ 10 ಲಕ್ಷ ಸರ್ಕಾರಿ ಶಾಲೆಗಳನ್ನು ಮೇಲ್ದರ್ಜೆಗೆ ಏರಿಸುವಂತೆ ಯೋಜನೆ ನಡೆಸಲು ಒತ್ತಾಯಿಸಿದ್ದಾರೆ.
ಭಾರತದಲ್ಲಿ ಪ್ರತಿನಿತ್ಯ 27 ಕೋಟಿ ವಿದ್ಯಾರ್ಥಿಗಳು ಶಾಲೆಗೆ ಹೋಗುತ್ತಿದ್ದು, ಅದರಲ್ಲಿ 18 ಕೋಟಿ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಿಗೆ ಹೋಗುತ್ತಿದ್ದಾರೆ.
ಶೇ.80 ರಷ್ಟು ಸರ್ಕಾರಿ ಶಾಲೆಗಳ ಸ್ಥಿತಿ ಜಂಕ್ಯಾರ್ಡ್ಗಿಂತ ಕೆಟ್ಟದಾಗಿದೆ. ಇಂತಹ ಕಳಪೆ ಶಿಕ್ಷಣವನ್ನು ನಮ್ಮ ಕೋಟಿಗಟ್ಟಲೆ ಮಕ್ಕಳಿಗೆ ನೀಡುತ್ತಿದ್ದರೆ. ಇದರಿಂದ ದೇಶ ಹೇಗೆ ಅಭಿವೃದ್ಧಿ ಹೊಂದುತ್ತದೆ ಎಂಬುದನ್ನು ಒಮ್ಮೆ ಊಹಿಸಿಕೊಳ್ಳಿ ಎಂದು ಕೇಜ್ರಿವಾಲ್ ಪತ್ರದಲ್ಲಿ ಬರೆದಿದ್ದಾರೆ.
ನೀವು 14,500 ಶಾಲೆಗಳ ಆಧುನೀಕರಣಕ್ಕೆ ಯೋಜನೆ ರೂಪಿಸಿದ್ದೀರಿ. ಆದರೆ ಈ ವೇಗದಲ್ಲಿ ಕೆಲಸ ಮಾಡಿದರೆ, ನಮ್ಮ ಎಲ್ಲಾ ಸರ್ಕಾರಿ ಶಾಲೆಗಳನ್ನು ಮೇಲ್ದರ್ಜೆಗೇರಿಸಲು 100 ವರ್ಷಗಳು ಬೇಕಾಗುತ್ತದೆ. ದೇಶದ ಎಲ್ಲಾ 10 ಲಕ್ಷ ಸರ್ಕಾರಿ ಶಾಲೆಗಳ ಪುನರಾಭಿವೃದ್ಧಿಗೆ ಯೋಜನೆಯನ್ನು ಸಿದ್ಧಪಡಿಸಲು ನಾನು ವಿನಂತಿಸುತ್ತೇನೆ ಎಂದಿದ್ದಾರೆ.