ಅಜ್ಜಿಯ ಕುತ್ತಿಗೆ ಸೀಳಿ ಟಿವಿ ನೋಡುತ್ತಾ ಕೂತ ಮೊಮ್ಮಗ! ಅಜ್ಜಿ ಸಾವು
ಶುಕ್ರವಾರ, 23 ಸೆಪ್ಟಂಬರ್ 2022 (11:01 IST)
ಚೆನ್ನೈ: ಹಣಕಾಸಿನ ವಿಚಾರಕ್ಕೆ ಗಲಾಟೆ ಮಾಡಿಕೊಂಡು ಅಜ್ಜಿಯ ಕುತ್ತಿಗೆಗೆ ಚಾಕುವಿನಿಂದ ಇರಿದ ಮೊಮ್ಮಗ ಟಿವಿ ನೋಡುತ್ತಾ ಕುಳಿತಿದ್ದ. ಈ ವೇಳೆ ಅಜ್ಜಿ ತೀವ್ರ ರಕ್ತಸ್ರಾವವಾಗಿ ಸಾವನ್ನಪ್ಪಿದ್ದಾಳೆ. ಇಂತಹ ಹೇಯ ಕೃತ್ಯ ಚೆನ್ನೈನಲ್ಲಿ ನಡೆದಿದೆ.
70 ವರ್ಷದ ವೃದ್ಧ ಮಹಿಳೆ ಕೊಲೆಗೀಡಾಗಿದ್ದಾಳೆ. ಈಕೆ ಒಂಟಿಯಾಗಿ ಮನೆಯಲ್ಲಿ ವಾಸ ಮಾಡುತ್ತಿದ್ದಳು. ಮನೆಗೆ ಬಂದಿದ್ದ ಮೊಮ್ಮಗನಿಗೆ ಅಜ್ಜಿ ಆತನ ಮೆಚ್ಚಿನ ಮೀನಿನೂಟ ಮಾಡಿ ಬಡಿಸಿದ್ದಳು. ಬಳಿಕ ಮೊಮ್ಮಗ ಅಜ್ಜಿ ಜೊತೆ ಹಣಕ್ಕಾಗಿ ಕಿತ್ತಾಟವಾಡಿದ್ದ.
ಇದೇ ಸಿಟ್ಟಿನಲ್ಲಿ ಅಜ್ಜಿಯ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದ. ಬಳಿಕ ಆಕೆಗೆ ತೀವ್ರ ರಕ್ತಸ್ರಾವವಾಗುತ್ತಿದ್ದರೂ ಕ್ಯಾರೇ ಎನ್ನದೇ ಟಿವಿ ಹಾಕಿಕೊಂಡು ಕೂತಿದ್ದ. ಸದ್ದು ಗದ್ದಲ ಕೇಳಿ ಪಕ್ಕದ ಮನೆಯವರು ಬಂದು ವಿಚಾರಿಸಿದಾಗ ಟಿವಿ ಸೌಂಡ್ ಎಂದು ಸುಳ್ಳು ಹೇಳಿದ್ದ. ಕೆಲವು ಸಮಯದ ಬಳಿಕ ತನ್ನ ತಾಯಿಗೆ ಕರೆ ಮಾಡಿದ್ದ ಆರೋಪಿ ಅಜ್ಜಿ ಗಾಯ ಮಾಡಿಕೊಂಡಿದ್ದಾರೆ ಎಂದು ಕತೆ ಕಟ್ಟಿದ್ದ. ಬಳಿಕ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲಿ ಆಕೆ ಸಾವನ್ನಪ್ಪಿದ್ದಳು. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.