ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡ: 11 ದೋಷಿಗಳಿಗೆ ಜೀವಾವಧಿ

ಶುಕ್ರವಾರ, 17 ಜೂನ್ 2016 (14:54 IST)
ಕಾಂಗ್ರೆಸ್ ಮಾಜಿ ಸಂಸದ ಎಹ್‌ಸಾನ್ ಜೆಫ್ರಿ ಸೇರಿದಂತೆ 69 ಮಂದಿಯ ದಾರುಣ ಸಾವಿಗೆ ಕಾರಣವಾಗಿದ್ದ ಗುಲ್ಬರ್ಗ್ ಸೊಸೈಟಿ ಹತ್ಯಾಕಾಂಡದ 11 ದೋಷಿಗಳಿಗೆ ಅಹಮದಾಬಾದ್ ಎಸ್‌ಐಟಿ ನ್ಯಾಯಾಲಯ ಶುಕ್ರವಾರ ಜೀವಾವಧಿ ಶಿಕ್ಷೆ ಪ್ರಕಟಿಸಿದೆ. ಉಳಿದ 13 ಆರೋಪಿಗಳಿಗೆ 7 ವರ್ಷದ ಸೆರೆವಾಸವನ್ನು ನೀಡಿಲಾಗಿದೆ. 
ಜೂನ್ 2 ರಂದು ಈ ಕುರಿತು ತೀರ್ಪು ಪ್ರಕಟಿಸಿದ್ದ ಕೋರ್ಟ್ 11ಜನರನ್ನು ಕೊಲೆ ಮತ್ತು ಇತರ ಅಪರಾಧದ ಮುಖ್ಯ ದೋಷಿಗಳೆಂದು ತೀರ್ಪು ನೀಡಿತ್ತು. ವಿಹೆಚ್‌ಪಿ ನಾಯಕ ಅತುಲ್ ವೈದ್ಯ ಸೇರಿದಂತೆ ಮತ್ತುಳಿದ 13 ಜನರನ್ನು 13 ಮಂದಿ ಕಡಿಮೆ ಪ್ರಮಾಣದ ಅಪರಾಧ ಕೃತ್ಯ ಎಸಗಿದವರೆಂದು ತೀರ್ಪು ನೀಡಿತ್ತಲ್ಲದೆ 36 ಮಂದಿಯನ್ನು ಖುಲಾಸೆಗೊಳಿಸಿತ್ತು.
 
2002ರಲ್ಲಿ ಬಂಧಿಸಲ್ಪಟ್ಟಿದ್ದ ಮುಖ್ಯ ಆರೋಪಿ ಈ ವರ್ಷ ಫೆಬ್ರವರಿ ತಿಂಗಳಲ್ಲಿ ತಾತ್ಕಾಲಿಕ ಜಾಮೀನು ಪಡೆದು ಹೊರ ಹೋಗಿದ್ದವ ಬಳಿಕ ತಲೆ ಮರೆಸಿಕೊಂಡಿದ್ದ ಮತ್ತು ಇದೇ ಜೂನ್ 13 ರಂದು ಶರಣಾಗಿದ್ದ. 
 
 ಸುಪ್ರೀಂ ಕೋರ್ಟ್‌ನಿಂದ ನೇಮಕಗೊಂಡಿದ್ದ ಎಸ್‌ಐಟಿಯನ್ನು ಪ್ರತಿನಿಧಿಸುತ್ತಿರುವ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಆರ್‌. ಸಿ. ಕೋಡೇಕರ್‌ ಅವರು ವಿಚಾರಣೆ ಸಂದರ್ಭದಲ್ಲಿ ಪ್ರಕರಣದ ಎಲ್ಲ 24 ಅಪರಾಧಿಗಳಿಗೆ ಮರಣ ದಂಡನೆ ಅಥವಾ ಸಾಯುವ ತನಕದ ಜೈಲು ವಾಸದ ಶಿಕ್ಷೆಗಿಂತ ಕಡಿಮೆ ಪ್ರಮಾಣದ ಶಿಕ್ಷೆಯನ್ನು ನೀಡಬೇಡಿ ಎಂದು ಕೇಳಿಕೊಂಡಿದ್ದರು. ಪೀಡಿತರ ಪರವಾಗಿ ವಾದಿಸಿದ್ದ  ವಕೀಲ ಎಸ್.ಎಮ್, ವೋರಾ ಸಹ ಇದೇ ವಾದವನ್ನು ಮುಂದಿಟ್ಟಿದ್ದರು. 
 
ಆದರೆ ಯಾರೊಬ್ಬರಿಗೂ ಮರಣದಂಡನೆಯಂತಹ ಗರಿಷ್ಟ ಶಿಕ್ಷೆಯನ್ನು ವಿಧಿಸದ ಕೋರ್ಟ್ ಜೀವಾವಧಿ ಮತ್ತು 7 ವರ್ಷದ ಕಠಿಣ ಸೆರೆವಾಸವನ್ನು ವಿಧಿಸಿದೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ