ಆಗಸ್ಟ್ 14 ರಿಂದ ಪಟಿದಾರ್ ಮೀಸಲಾತಿ ಹೋರಾಟ ಆರಂಭ: ಹಾರ್ದಿಕ್ ಪಟೇಲ್ ಘೋಷಣೆ

ಶನಿವಾರ, 30 ಜುಲೈ 2016 (13:37 IST)
ಒಬಿಸಿ ವರ್ಗಗಳಿಗೆ ಮೀಸಲಾತಿ ನೀಡುವಂತೆ ಒತ್ತಾಯಿಸಿ ನಡೆಯುತ್ತಿರುವ ಹೋರಾಟ ಸ್ಥಗಿತಗೊಂಡಿದ್ದು ಆಗಸ್ಟ್ ತಿಂಗಳಿನಿಂದ ಮತ್ತೆ ಚಾಲನೆ ನೀಡಲು ಪಟೇಲ್ ಮೀಸಲಾತಿ ಹೋರಾಟ ಸಮಿತಿಯ ಮುಖ್ಯಸ್ಥ ಹಾರ್ದಿಕ್ ಪಟೇಲ್ ಚಿಂತನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಉದಯಪುರದಲ್ಲಿ ಮಾಜಿ ಕಾಂಗ್ರೆಸ್ ಶಾಸಕರ ನಿವಾಸದಲ್ಲಿ ವಾಸ್ತವ್ಯ ಹೂಡಿರುವ ಹಾರ್ದಿಕ್ ಪಟೇಲ್, ಪಟಿದಾರ್ ಅನಾಮತ್ ಅಂದೋಲನ್ ಸಮಿತಿಯ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಸಭೆಯಲ್ಲಿ ಪಟಿದಾರ್ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳು ಮತ್ತು ರಾಜ್ಯ ಸರಕಾರ ಮೀಸಲಾತಿ ರಹಿತ ಸಮುದಾಯದವರಿಗೆ ಶೇ.10 ರಷ್ಟು ಕೋಟಾ ನೀಡಿರುವ ಬಗ್ಗೆ ವಿರೋಧ ವ್ಯಕ್ತಪಡಿಸಲು ನಿರ್ಧರಿಸಲಾಯಿತು ಎಂದು ಪಟಿದಾರ ಸಮಿತಿಯ ನಾಯಕರು ತಿಳಿಸಿದ್ದಾರೆ. 
 
ಸರಕಾರಿ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ನೀಡುವಂತೆ ಒತ್ತಾಯಿಸಿ ಶಾಂತಿಯುತ ಹೋರಾಟ ಮುಂದಿನ ತಿಂಗಳಿನಿಂದ ಮುಂದುವರಿಸಲಾಗುವುದು ಎಂದು 23 ವರ್ಷ ವಯಸ್ಸಿನ ಹಾರ್ದಿಕ್ ಪಟೇಲ್ ತಿಳಿಸಿದ್ದಾರೆ.
 
ಕಳೆದ ಜುಲೈ 8 ರಂದು ಗುಜರಾತ್‌ನಿಂದ ಆರು ತಿಂಗಳುಗಳ ಕಾಲ ಹೊರಗಿರಬೇಕು. ಮೂರು ತಿಂಗಳುಗಳ ಕಾಲ ಮೆಹಸಾನಾ ಜಿಲ್ಲೆಯನ್ನು ಪ್ರವೇಶಿಸಬಾರದು ಎನ್ನುವ ಷರತ್ತಿನ ಮೇಲೆ ಕೋರ್ಟ್, ಹಾರ್ದಿಕ್ ಪಟೇಲ್‌ಗೆ ಜಾಮೀನು ಮಂಜೂರು ಮಾಡಿದೆ
 
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ