ಧೋ ಎಂದು ಸುರಿಯುತ್ತಿರುವ ಮಳೆಗೆ ಮುಂಬೈ ನಗರ ಅಕ್ಷರಶಃ ಮುಳುಗಿ ಹೋಗಿದೆ. ತಗ್ಗು ಪ್ರದೇಶಗಳು ಜಲಾವೃತವಾಗಿದ್ದು, ಮಳೆಯಿಂದ ಅತಿಯಾದ ಟ್ರಾಫಿಕ್ ಜಾಮ್ ಉಂಟಾಗಿದ್ದು, ಲೋಕಲ್ ಟ್ರೇನ್ ಸಂಚಾರವನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಇದರ ಜೊತೆಗೆ ಮುಂದಿನ 24 ಗಂಟೆಗಳಲ್ಲಿ ಮುಬೈನಲ್ಲಿ ಧಾರಾಕಾರ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದ್ದು, ನಿವಾಸಿಗಳಿಗೆ ಮನೆಯಿಂದ ಹೊರ ಬರದಂತೆ ಸೂಚನೆ ನೀಡಲಾಗಿದೆ. ತೀರಾ ಅವಶ್ಯಕತೆ ಬಿದ್ದಲ್ಲಿ ಮಾತ್ರ ಮನೆಯಿಂದ ಹೊರಹೋಗುವಂತೆ ಸೂಚಿಸಲಾಗಿದೆ. ಭಾರೀ ಮಳೆಯಿಂದಾಗಿ ಹಲವು ವಿಮಾನಗಳ ಹಾರಾಟ ಸಹ ಸ್ಥಗಿತಗೊಳಿಸಲಾಗಿದೆ.
ಹವಾಮಾನ ಇಲಾಖೆ ಮುನ್ಸೂಚನೆ ಹಿನ್ನೆಲೆಯಲ್ಲಿ ಪರಿಸ್ಥಿತಿ ಎದುರಿಸಲು ಎಲ್ಲ ರೀತಿಯ ತಯಾರಿ ಮಾಡಿಕೊಂಡಿರುವುದಾಗಿ ಮುಂಬೈ ಮಹಾನಗರ ಪಾಲಿಕೆ ತಿಳಿಸಿದೆ. ಭಾರೀ ಮಳೆಯಿಂದಾಗಿ ದಾದರ್, ಮುಂಬೈ ಸೆಂಟ್ರಲ್, ಕುರ್ಲಾ, ಅಂಧೇರಿ, ಸಾಕಿನಕ ಪ್ರದೇಶಗಳು ನೀರಿನಿಂದ ಆವೃತ್ತವಾಗಿವೆ. ಬೆಳಗ್ಗೆ 8ರಿಂದ ಮಧ್ಯಾಹ್ನ 3ಗಂಟೆವರೆಗೆ ಅತಿ ಹೆಚ್ಚು ಮಳೆ ಸುರಿದಿರುವುದು ಮುಂಬೈ ಮಹಾನಗರ ಪಾಲಿಕೆಯ ಮೂರು ಹವಾಮಾನ ಕೇಂದ್ರಗಳಲ್ಲಿ ದಾಖಲಾಗಿದೆ. ಮುಂಬೈ ನಗರದಲ್ಲಿ 30.92 ಮಿ.ಮೀ ಮಳೆ ದಾಖಲಾಗಿದ್ದು, ಪೂರ್ವ ಮತ್ತು ಪಶ್ಚಿಮ ಸಬರ್ಬನ್`ನಲ್ಲಿ 15.56 ಮಿ.ಮೀ ಮತ್ತು 12.42 ಮಿ/ಮೀ ಮಳೆ ದಾಖಲಾಗಿದೆ. ಭಾರೀ ಮಳೆ ಹೊರತಾಗಿಯೂ ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ