ಚೆನ್ನೈ : ಶುದ್ಧತೆ ಮತ್ತು ಪಾವಿತ್ರ್ಯತೆ ಕಾಪಾಡಲು ರಾಜ್ಯದ ಎಲ್ಲ ದೇವಸ್ಥಾನದ ಆವರಣದ ಒಳಗಡೆ ಮೊಬೈಲ್ ಫೋನ್ ಮತ್ತು ಕ್ಯಾಮೆರಾವನ್ನು ನಿಷೇಧಿಸುವಂತೆ ಮದ್ರಾಸ್ ಹೈಕೋರ್ಟ್ ತಮಿಳುನಾಡು ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಮಧುರೈ ಪೀಠದ ನ್ಯಾಯಮೂರ್ತಿಗಳಾದ ಆರ್ ಮಹದೇವನ್ ಮತ್ತು ಜೆ ಸತ್ಯನಾರಾಯಣ ಅವರಿದ್ದ ದ್ವಿಸದಸ್ಯ ಪೀಠವು ಭಕ್ತರು ಮತ್ತು ದೇವಾಲಯಗಳಿಗೆ ಭೇಟಿ ನೀಡುವವರು ಯೋಗ್ಯವಾದ ವಸ್ತ್ರ ಸಂಹಿತೆಯನ್ನು ಪಾಲಿಸುವಂತೆ ಸೂಚಿಸಿ ಎಂದು ರಾಜ್ಯಕ್ಕೆ ನಿರ್ದೇಶನ ನೀಡಿದೆ.
ತೂತುಕುಡಿ ಜಿಲ್ಲೆಯ ಪುರಾತನ ಅರುಲ್ಮಿಗು ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಕಾರ್ಯನಿರ್ವಾಹಕರೊಬ್ಬರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ವೇಳೆ ಕೋರ್ಟ್ ಈ ಆದೇಶ ಪ್ರಕಟಿಸಿದೆ.
ದೇವಾಲಯಗಳ ಒಳಗೆ ಇರುವ ಮೊಬೈಲ್ ಫೋನ್ಗಳು ಮತ್ತು ಕ್ಯಾಮೆರಾಗಳು ಭಕ್ತರ ಗಮನವನ್ನು ಬೇರೆಡೆಗೆ ತಿರುಗಿಸುತ್ತವೆ. ಆದ್ದರಿಂದ ದೇವಾಲಯದ ಆವರಣದಲ್ಲಿ ಅವುಗಳ ಬಳಕೆಯನ್ನು ದೇವಾಲಯದ ಅಧಿಕಾರಿಗಳು ನಿಯಂತ್ರಿಸಬೇಕು ಎಂದು ಪೀಠ ಹೇಳಿದೆ.
ಸಂವಿಧಾನದ 25 ನೇ ವಿಧಿಯ ಅಡಿಯಲ್ಲಿ ಎಲ್ಲಾ ವ್ಯಕ್ತಿಗಳು ಮುಕ್ತವಾಗಿ ಧರ್ಮವನ್ನು ಪ್ರತಿಪಾದಿಸಲು, ಆಚರಿಸಲು ಮತ್ತು ಪ್ರಚಾರ ಮಾಡಲು ಅರ್ಹರಾಗಿದ್ದಾರೆ ಎಂಬುದಕ್ಕೆ ಯಾವುದೇ ಆಕ್ಷೇಪವಿಲ್ಲ.