ಧ್ವನಿವರ್ಧಕ ಬಳಕೆ ವಿರುದ್ಧ ಕ್ರಮಕ್ಕೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶ
ಶುಕ್ರವಾರ, 8 ಅಕ್ಟೋಬರ್ 2021 (11:47 IST)
ಶಬ್ದ ಮಾಲಿನ್ಯ ಕಾಯಿದೆಗೆ ವಿರುದ್ಧವಾಗಿ ಧಾರ್ಮಿಕ ಕಟ್ಟಡಗಳಲ್ಲಿ ಬಳಸಲಾಗುವ ಧ್ವನಿವರ್ಧಕಗಳು, ಆಯಂಪ್ಲಿಫೈಯರ್ಗಳು ಮತ್ತು ಇತರ ಉಪಕರಣಗಳನ್ನು ಸ್ವಾಧೀನಪಡಿಸಿಕೊಳ್ಳುವ ಮತ್ತು ಜಪ್ತಿ ಮಾಡುವ ಅರ್ಜಿಗೆ ಉತ್ತರಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.
ಧಾರ್ಮಿಕ ಕಟ್ಟಡಗಳಲ್ಲಿ ಅನಧಿಕೃತವಾಗಿ ಆಯಂಪ್ಲಿಫೈಯರ್ ಮತ್ತು ಧ್ವನಿವರ್ಧಕಗಳನ್ನು ಬಳಸುವುದನ್ನು ನಿಲ್ಲಿಸುವ ಉದ್ದೇಶದಿಂದ ಹಲವರು ಮಧ್ಯಂತರ ಅರ್ಜಿಗಳನ್ನು ಸಲ್ಲಿಸಿದ್ದರು. ಈ ರೀತಿ ಆಯಂಪ್ಲಿಫೈಯರ್, ಧ್ವನಿವರ್ಧಕ ಮುಂತಾದವುಗಳನ್ನು ಬಳಸುವುದು ನಿಯಮಗಳಿಗೆ ವಿರುದ್ಧವಾಗಿದೆ ಎಂದೂ ದೂರಿದ್ದರು. ಶಬ್ದ ಮಾಲಿನ್ಯ (ರೆಗ್ಯುಲೇಶನ್ ಮತ್ತು ನಿಯಂತ್ರಣ) ನಿಯಮಗಳು, 2000 ಕಾಯ್ದೆ ಉಲ್ಲಂಘನೆ ವಿಚಾರವಾಗಿ ಅರ್ಜಿದಾರರ ದೂರಿಗೆ ಸಂಬಂಧಪಟ್ಟಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನೋಟಿಸ್ ನೀಡಿದ್ದು, ಉತ್ತರಿಸುವಂತೆ ಕೋರಿದೆ.
ಈ ಸಂಬಂಧ ರಾಜ್ಯಕ್ಕೆ ಪತ್ರ ಸಲ್ಲಿಸಿದ ಹಂಗಾಮಿ ಮುಖ್ಯ ನ್ಯಾಯಾಧೀಶರಾದ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಎಸ್.ಎಸ್. ಮಗದುಮ್ ನೇತೃತ್ವದ ಹೈಕೋರ್ಟ್ ವಿಭಾಗೀಯ ಪೀಠ, ನೋಟಿಸ್ಗೆ ಉತ್ತರಿಸುವಂತೆ ಸೂಚಿಸಿದ್ದು, ನವೆಂಬರ್ 16ಕ್ಕೆ ವಿಚಾರಣೆಯನ್ನು ಮುಂದೂಡಿದ್ದಾರೆ.