ಪರಸ್ಪರ ಮೂತ್ರಪಿಂಡ ವಿನಿಮಯ ಮಾಡಿಕೊಂಡ ಹಿಂದೂ-ಮುಸ್ಲಿಂ ದಂಪತಿಗಳು

ಮಂಗಳವಾರ, 23 ಮೇ 2017 (08:33 IST)
ನವದೆಹಲಿ: ಮಾನವೀಯತೆ ಎನ್ನುವುದರ ಮುಂದೆ, ಜಾತಿ, ಧರ್ಮ, ಲಿಂಗದ ಬೇಧವಿಲ್ಲ. ಒಂದು ಜೀವ ಉಳಿಸುವುದು ಪುಣ್ಯದ ಕೆಲಸ ಎನ್ನುವುದು ಎಲ್ಲಾ ಧರ್ಮದ ಸಾರ. ಇದನ್ನು ಈ ದಂಪತಿಗಳು ಮಾಡಿ ತೋರಿಸಿದ್ದಾರೆ.

 
ಉತ್ತರ ಪ್ರದೇಶದ ನೋಯ್ಡಾದಲ್ಲಿ ಇಂತಹದ್ದೊಂದು ಮಾನವೀಯತೆ ಮೆರೆದ ಘಟನೆ ನಡೆದಿದೆ. ಹಿಂದೂ ಧರ್ಮಕ್ಕೆ ಸೇರಿದ ಮತ್ತು ಮುಸ್ಲಿಂ ಧರ್ಮಕ್ಕೆ ಸೇರಿದ ದಂಪತಿಯಲ್ಲಿ ಪತಿಗೆ ಕಿಡ್ನಿ ಕಸಿ ಮಾಡಬೇಕಾಗಿತ್ತು.

29 ವರ್ಷದ ಇಕ್ರಾಂ ಮತ್ತು 26 ವರ್ಷದ ರಾಹುಲ್ ವರಿಷ್ಠ್ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದರು. ಇಬ್ಬರಿಗೂ ದಾನಿಗಳ ಅಗತ್ಯವಿತ್ತು. ಇಕ್ರಾಂ ರಕ್ತದ ಗುಂಪು ಎ ಪೊಸಿಟಿವ್ ಆಗಿದ್ದರೆ ಪತ್ನಿ ರಾಝಿಯಾದ್ದು ಬಿ ಪೊಸಿಟಿವ್ ಆಗಿತ್ತು. ಅತ್ತ ರಾಹುಲ್ ರಕ್ತದ ಮಾದರಿ ಬಿ ಪೊಸಿಟಿವ್ ಮತ್ತು ಪತ್ನಿ ಪವಿತ್ರಾಳದ್ದು ಎ ಪೊಸಿಟಿವ್ ಆಗಿತ್ತು.

ಈ ಎರಡೂ ದಂಪತಿಗಳಿಗೆ ದಾನಿಗಳು ಸಿಗದೆ ನಿರಾಶೆಯಾಗಿತ್ತು. ಈ ಸಂದರ್ಭದಲ್ಲಿ ಅವರು ದಾಖಲಾಗಿದ್ದ ಜೆಪಿ ಆಸ್ಪತ್ರೆಯ ವೈದ್ಯರು ಎರಡೂ ಕುಟುಂಬದವರ ಜತೆ ಸಮಾಲೋಚನೆ ನಡೆಸಿ ಇಂತಹದ್ದೊಂದು ಐಡಿಯಾ ಕೊಟ್ಟರು.

ತಕ್ಷಣ ಇಬ್ಬರೂ ಪತ್ನಿಯರು ಇದಕ್ಕೆ ಒಪ್ಪಿಕೊಂಡರು. ಐದು ತಾಸುಗಳ ಶಸ್ತ್ರಚಿಕಿತ್ಸೆಯ ನಂತರ ಪತ್ನಿಯರ ಮೂತ್ರಪಿಂಡವನ್ನು ಪರಸ್ಪರ ದಾನ ಮಾಡಲಾಯಿತು. ಇದರಿಂದ ಸಮಾಜಕ್ಕೆ ಹೊಸ ಸಂದೇಶವನ್ನೇ ನೀಡಿದಂತಾಯಿತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ