ಕಾಂಗ್ರೆಸ್ ತೊರೆಯುವುದು ಶತಃ ಸಿದ್ಧ: ವಿ. ಶ್ರೀನಿವಾಸ ಪ್ರಸಾದ್
ಶುಕ್ರವಾರ, 14 ಅಕ್ಟೋಬರ್ 2016 (14:23 IST)
ನಾನು ಕಾಂಗ್ರೆಸ್ ಪಕ್ಷ ತೊರೆಯುವುದು ಶತಃ ಸಿದ್ಧ ಎಂದು ಮಾಜಿ ಸಚಿವ, ಕಾಂಗ್ರೆಸ್ ಹಿರಿಯ ನಾಯಕ ವಿ. ಶ್ರೀನಿವಾಸ ಪ್ರಸಾದ್ ಮತ್ತೊಮ್ಮೆ ಸ್ಪಷ್ಟ ಪಡಿಸಿದ್ದಾರೆ.
ಮೈಸೂರಿನಲ್ಲಿ ಮಾತನ್ನಾಡುತ್ತಿದ್ದ ಅವರು, ನಾನು ಕಾಂಗ್ರೆಸ್ ಪಕ್ಷವನ್ನು ತ್ಯಜಿಸುತ್ತಿದ್ದೇನೆ, ಯಾವುದೇ ಕಾರಣಕ್ಕೂ ನನ್ನ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದ್ದಾರೆ.
ನಾನು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಂತೆ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ಗುಡ್ ಬೈ ಹೇಳುತ್ತೇನೆ.
ಇಲ್ಲಿ ಎಲ್ಲವೂ ಮುಗಿದು ಹೋಗಿದೆ. ಪಕ್ಷದಲ್ಲಿ ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗಿದ್ದು ಮನಸ್ಸಿದೆ ತುಂಬಾ ನೋವಾಗಿದೆ ಎಂದು ತಮ್ಮ ಒಳಗಿನ ಬೇಗುದಿಯನ್ನು ಹೊರ ಹಾಕಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ವಿರುದ್ಧ ರೂಪಿಸಿದ್ದ ಷಡ್ಯಂತ್ರದ ಕಾರಣದಿಂದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ನೇರವಾಗಿ ಆರೋಪಿಸಿ, ಅಕ್ಟೋಬರ್ 17 ರಂದು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ನಿರ್ಧರಿಸಿದ್ದಾರೆ.
ಸ್ಪೀಕರ್ ಕೆ.ಬಿ. ಕೋಳಿವಾಡ್ ಅವರ ಭೇಟಿಗೆ ಈಗಾಗಲೇ ಸಮಯ ನಿಗದಿಯಾಗಿದ್ದು ಸೋಮವಾರ 11 ಗಂಟೆಗೆ ಪ್ರಸಾದ್ ಸ್ಪೀಕರ್ ಕೈಗೆ ರಾಜೀನಾಮೆ ಹಸ್ತಾಂತರಿಸಲಿದ್ದಾರೆ.
ಶ್ರೀನಿವಾಸ್ ಪ್ರಸಾದ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಗುರುವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಸಚಿವ ಮಹಾದೇವ ಪ್ರಸಾದ್, ಶ್ರೀನಿವಾಸ್ ಪ್ರಸಾದ್ ಅವರು ಹಿರಿಯ ರಾಜಕಾರಣಿಗಳು. ಹೀ ನೋಸ್ ವಾಟ್ ಟು ಡು, ವಾಟ್ ನಾಟ್ ಡು ಎಂದು ಖಾರವಾಗಿ ನುಡಿದಿದ್ದರು.
ಪಕ್ಷ ತೊರೆಯಲು ಹೊರಟಿರುವ ಪ್ರಸಾದ್ ಅವರಿಗೆ ಬಿಜೆಪಿ ಗಾಳ ಹಾಕುತ್ತಿದೆ. ಜೆಡಿಎಸ್ ಕೂಡ ಅವರನ್ನು ಸೆಳೆದುಕೊಳ್ಳಲು ಸರ್ವ ಪ್ರಯತ್ನಗಳನ್ನು ನಡೆಸಿದೆ.
ಪ್ರಸಾದ್ ತೆನೆ ಹೊರುತ್ತಾರೋ ಅಥವಾ ಕಮಲವನ್ನು ಮುಡಿಗೇರಿಸಿಕೊಳ್ಳುತ್ತಾರೋ ಅಥವಾ ಬೇರೆ ಯಾವ ನಿರ್ಧಾರವನ್ನು ಕೈಗೊಳ್ಳುತ್ತಾರೋ ಎಂಬುದನ್ನು ಕಾದು ನೋಡಬೇಕಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ