ಐಎಎಸ್‌ ಕೋಚಿಂಗ್ ಸೆಂಟರ್ ದುರಂತ: ಸುಪ್ರೀಂ ಕೋರ್ಟ್‌ನಿಂದ ಸ್ವಯಂಪ್ರೇರಿತ ದೂರು ದಾಖಲು

Sampriya

ಸೋಮವಾರ, 5 ಆಗಸ್ಟ್ 2024 (14:26 IST)
Photo Courtesy X
ನವದೆಹಲಿ: ನವದೆಹಲಿಯ ನೆಲಮಹಡಿಯಲ್ಲಿದ್ದ ಐಎಎಸ್‌ ಕೋಚಿಂಗ್ ಸೆಂಟರ್‌ಗೆ ನೀರು ನುಗ್ಗಿ ಯುಪಿಎಸ್‌ಸಿ ಆಕಾಂಕ್ಷಿಗಳು ಸಾವಿಗೀಡಾದ ಘಟನೆ ಸಂಬಂಧ ಸುಪ್ರೀಂ ಕೋರ್ಟ್‌ ಸೋಮವಾರ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ. ಈ ಬಗ್ಗೆ ವಿವರಣೆ ಕೇಳಿ ಕೇಂದ್ರ ಹಾಗೂ ದೆಹಲಿ ಸರ್ಕಾರಗಳಿಗೆ ನೋಟಿಸ್ ಜಾರಿ ಮಾಡಿದೆ.

ಕೋಚಿಂಗ್ ಸೆಂಟರ್‌ಗಳು ಸಾವಿನ ಚೇಂಬರ್‌ಗಳಾಗಿ ಮಾರ್ಪಟ್ಟಿವೆ. ಸುರಕ್ಷತಾ ನಿಯಮಗಳು ಮತ್ತು ಗೌರವಯುತ ಜೀವನಕ್ಕಾಗಿ ಮೂಲಭೂತ ಮಾನದಂಡಗಳ ಸಂಪೂರ್ಣ ಪಾಲನೆ ಮಾಡದಿದ್ದರೆ ಕೋಚಿಂಗ್ ಸಂಸ್ಥೆಗಳು ಆನ್‌ಲೈನ್‌ನಲ್ಲಿ ಕಾರ್ಯನಿರ್ವಹಿಸಬಹುದು ಎಂದು ಸುಪ್ರೀಂ ಅಭಿಪ್ರಾಯಪಟ್ಟಿದೆ.

ಕೋಚಿಂಗ್ ಸೆಂಟರ್‌ಗಳು ದೇಶದ ವಿವಿಧ ಭಾಗಗಳಿಂದ ಬರುವ ಆಕಾಂಕ್ಷಿಗಳ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿವೆ ಎಂದು ನ್ಯಾಯಮೂರ್ತಿಗಳಾದ ಸೂರ್ಯಕಾಂತ ಹಾಗೂ ಉಜ್ಜಲ್ ಭುಯನ್ ಅವರಿದ್ದ ಪೀಠ ಕಟು ಮಾತುಗಳಲ್ಲಿ ಟೀಕಿಸಿ, ಇದೊಂದು ಎಲ್ಲರ ಕಣ್ಣು ತೆರೆಸಬೇಕಾದ ಘಟನೆ ಎಂದು ಪೀಠ ಕಾಳಜಿ ವ್ಯಕ್ತಪಡಿಸಿತು.

ಓಲ್ಡ್ ರಾಜಿಂದರ್‌ ನಗರದಲ್ಲಿರುವ ರಾವ್ಸ್‌ ಐಎಎಸ್ ಸ್ಟಡಿ ಸರ್ಕಲ್‌ ಕೋಚಿಂಗ್‌ ಸೆಂಟರ್‌ನಲ್ಲಿ ಈ ದುರಂತ ನಡೆದಿತ್ತು. ಉತ್ತರ ಪ್ರದೇಶದ ಶ್ರೇಯಾ ಯಾದವ್‌ (25), ತೆಲಂಗಾಣದ ತನ್ಯಾ ಸೋನಿ (25) ಹಾಗೂ ತೆಲಂಗಾಣದ ನೆವಿನ್ ಡೆಲ್ವಿನ್ (24) ಮೃತಪಟ್ಟಿದ್ದರು.

ಪ್ರಕರಣದ ತನಿಖೆಯನ್ನು ದೆಹಲಿ ಹೈಕೋರ್ಟ್‌ ಈಗಾಗಲೇ ಸಿಬಿಐ ತನಿಖೆಗೆ ವರ್ಗಾಯಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ