ಭಾರತ ಸುಧಾರಣೆ ಆಗುತ್ತಿದ್ದರೆ ಜಗತ್ತೇ ಪರಿವರ್ತನೆ ಆಗುತ್ತಿರುತ್ತದೆ: ಮೋದಿ

ಭಾನುವಾರ, 26 ಸೆಪ್ಟಂಬರ್ 2021 (10:30 IST)
ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರು ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿ (ಯುಎನ್ಜಿಎ) 76ನೇ ಅಧಿವೇಶನವನ್ನು ಉದ್ದೇಶಿಸಿ ಆಡಿದ ಮಾತು ಇದೀಗ ಭಾರಿ ಗಮನ ಸೆಳೆಯುತ್ತಿದ್ದು, ಭಾರತ ವಿಶ್ವಗುರು ಎಂಬುದನ್ನು ಅವರು ಪರೋಕ್ಷವಾಗಿ ಹೇಳಿದ್ದಾರೆ.

ಭಾರತ ಪ್ರಜಾಪ್ರಭುತ್ವದ ತಾಯಿ ಎನ್ನುವ ಮೂಲಕ ಇಲ್ಲಿನ ವ್ಯವಸ್ಥೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಣ್ಣಿಸಿರುವ ಪ್ರಧಾನಿ ಮೋದಿ, ಭಾರತ ಸುಧಾರಣೆ ಆಗುತ್ತಿದ್ದರೆ, ಜಗತ್ತೇ ಪರಿವರ್ತನೆ ಆಗುತ್ತಿರುತ್ತದೆ ಎಂಬ ವಿಶ್ವಾಸದ ನುಡಿಗಳನ್ನೂ ಹೊರಹೊಮ್ಮಿಸಿದ್ದಾರೆ.
ಜೋ ಬೈಡೆನ್ ಜೊತೆ ವಾಷಿಂಗ್ಟನ್ನಲ್ಲಿ ದ್ವಿಪಕ್ಷೀಯ ಸಭೆಯನ್ನು ನಡೆಸಿ ನ್ಯೂಯಾರ್ಕ್ಗೆ ಬಂದಿಳಿದ ಮೋದಿ, ಭಾರತದ ಪ್ರಜಾಪ್ರಭುತ್ವ ಯಾಕೆ ವಿಶೇಷ ಎಂಬುದನ್ನೂ ವಿವರಿಸಿದರು. ಹಲವು ಭಾಷೆ, ಬಹಳ ಆಡುಭಾಷೆ, ವಿವಿಧ ಜೀವನಶೈಲಿ ಜೊತೆಗೆ ಆಹಾರ ಪದ್ಧತಿಯನ್ನೂ ಹೊಂದಿರುವುದೇ ಒಂದು ಸ್ಪಂದನಾಶೀಲ ಪ್ರಜಾಪ್ರಭುತ್ವದ ಪ್ರತೀಕ ಎಂದರು.
ಜಗತ್ತಿನ ಪ್ರತಿ 6 ಜನರಿಗೆ ಒಬ್ಬರಂತೆ ಭಾರತೀಯರಿದ್ದಾರೆ. ಹೀಗಾಗಿ ಭಾರತೀಯರ ಬೆಳವಣಿಗೆ ಜಾಗತಿಕ ಬೆಳವಣಿಗೆಗೂ ಕಾರಣವಾಗುತ್ತದೆ. ಭಾರತ ಬೆಳೆದಾಗ ವಿಶ್ವವೂ ಬೆಳೆಯುತ್ತದೆ, ಭಾರತ ಸುಧಾರಣೆಯಾದಾಗ ಪ್ರಪಂಚವೂ ಪರಿವರ್ತನೆ ಆಗುತ್ತದೆ ಎಂಬುದಾಗಿ ಮೋದಿ ಹೇಳಿದರು.
ಜಗತ್ತಿನ ಮೊದಲ ಡಿಎನ್ಎ ವ್ಯಾಕ್ಸಿನ್ ಕೂಡ ಭಾರತದಿಂದಲೇ ಅಭಿವೃದ್ಧಿ ಪಡಿಸಲಾಗಿದೆ ಎಂಬುದನ್ನೂ ಅವರು ಯುಎನ್ಜಿಎ ಗಮನಕ್ಕೆ ತಂದರು. ಇದು 12 ವರ್ಷ ಮೇಲ್ಪಟ್ಟ ಯಾರಿಗಾದರೂ ಕೊಡಬಹುದಾಗಿದ್ದು, ಎಮ್ಆರ್ಎನ್ಎ ವ್ಯಾಕ್ಸಿನ್ ಅಭಿವೃದ್ಧಿ ಪಡಿಸುವಿಕೆ ಅಂತಿಮ ಹಂತದಲ್ಲಿದೆ ಎಂಬುದನ್ನೂ ತಿಳಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ