ನವದೆಹಲಿ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಜೈಲು ಶಿಕ್ಷೆಯಾಗಿ ಸಂಸದ ಸ್ಥಾನದಿಂದ ಅನರ್ಹವಾಗುತ್ತಿದ್ದಂತೆ 2013ರಲ್ಲಿ ಯುಪಿಎ ಸರ್ಕಾರ ಹೊರಡಿಸಿದ ಸುಗ್ರೀವಾಜ್ಞೆ ವಿಚಾರ ಈಗ ಚರ್ಚೆ ಆಗುತ್ತಿದೆ.
ಈ ಚರ್ಚೆಯಾಗಲು ಕಾರಣ 2013ರಲ್ಲಿ ನಡೆದ ಘಟನೆ. ಅಂದು ಸುಗ್ರೀವಾಜ್ಞೆಯನ್ನು ಹರಿದು ಎಸೆಯದೇ ಇದ್ದಿದ್ದರೆ ರಾಹುಲ್ ಗಾಂಧಿ ಅನರ್ಹರಾಗುತ್ತಿರಲಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಕಳಂಕಿತ ಸಂಸದರು ಮತ್ತು ಶಾಸಕರ ಸದಸ್ಯತ್ವ ಅನರ್ಹಗೊಳಿಸುವ ಸಂಬಂಧವಾಗಿ ಸುಪ್ರೀಂ ಕೋರ್ಟ್ ಪ್ರಕಟಿಸಿದ ತೀರ್ಪು ರಾಜಕೀಯ ಪಕ್ಷಗಳಿಗೆ ಸಂಕಷ್ಟ ತಂದಿಟ್ಟಿತ್ತು. ಈ ತೀರ್ಪನ್ನು ಜಾರಿಗೊಳಿಸದೇ ಇರಲು ಪ್ರಜಾಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ತರಬೇಕೆಂದು ಯುಪಿಎ ಬೆಂಬಲಿತ ಪಕ್ಷಗಳಿಂದಲೇ ವಿಪರೀತ ಒತ್ತಡ ಬಂದಿತ್ತು.
ಈ ಒತ್ತಡಕ್ಕೆ ಮಣಿದ ಪ್ರಧಾನಿ ಮನಮೋಹನ್ಸಿಂಗ್ ನೇತೃತ್ವದ ಸರ್ಕಾರ ಸುಗ್ರೀವಾಜ್ಞೆ ಹೊರಡಿಸುವ ಮೂಲಕ ಯಾವುದೇ ಜನಪ್ರತಿನಿಧಿಗೆ ಶಿಕ್ಷೆಯಾದರೆ ಅವರು ಅದರ ವಿರುದ್ಧ ಮೇಲ್ಮನವಿ ಸಲ್ಲಿಸಲು 90 ದಿನಗಳ ಅವಕಾಶ ಕಲ್ಪಿಸಿತ್ತು.
ಸುಗ್ರೀವಾಜ್ಞೆ ಹೊರಡಿಸುತ್ತಿದ್ದಂತೆ ಕಳಂಕಿತ ಸಂಸದರ ರಕ್ಷಣೆಗೆ ಸರ್ಕಾರ ಮುಂದಾಗಿದೆ ಎಂಬ ಟೀಕೆ ವ್ಯಕ್ತವಾಯಿತು. ಸರ್ಕಾರದ ಆತುರದ ಕ್ರಮವನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪ್ರಶ್ನಿಸಿದರು. ದೇಶದೆಲ್ಲೆಡೆ ಭಾರೀ ಚರ್ಚೆ ಆಗುತ್ತಿದ್ದಂತೆ ರಾಹುಲ್ ಗಾಂಧಿ ಮಧ್ಯ ಪ್ರವೇಶ ಮಾಡಿದರು.