ಅಡುಗೆ ಎಣ್ಣೆ ದಿಢೀರ್ ಏರಿಕೆ!

ಗುರುವಾರ, 2 ಜೂನ್ 2022 (07:07 IST)
ಇಸ್ಲಾಮಾಬಾದ್ : ಈಗಾಗಲೇ ಆರ್ಥಿಕ ಬಿಕ್ಕಟ್ಟಿನಿಂದ ದಿವಾಳಿಯಾಗಿರುವ ಶ್ರೀಲಂಕಾದಲ್ಲಿ ದಿನೇ ದಿನೇ ಪರಿಸ್ಥಿತಿ ಕ್ಷೀಣಿಸುತ್ತಿದೆ.

ಇದರಿಂದ ಜನಸಾಮಾನ್ಯರೂ ಪರದಾಡುವಂತಾಗಿದೆ. ಇದೀಗ ನೆರೆಯ ಪಾಕಿಸ್ತಾನದಲ್ಲೂ ಅದೇ ಪರಿಸ್ಥಿತಿ ಎದುರಾಗುತ್ತಿದೆ. ಆದಾಯದ ಬಹುಪಾಲನ್ನು ಸೇನೆಗೆ ಖರ್ಚು ಮಾಡುವ ಪಾಕಿಸ್ತಾನದಲ್ಲಿ ಇದೀಗ ಆರ್ಥಿಕ ಬಿಕ್ಕಟ್ಟು ತೀವ್ರಗೊಂಡಿದೆ. ಖಾದ್ಯ ತೈಲ, ತುಪ್ಪ ಸೇರಿದಂತೆ ಹಲವು ಅಗತ್ಯ ವಸ್ತುಗಳ ಬೆಲೆ ದಾಖಲೆ ಮಟ್ಟಕ್ಕೆ ತಲುಪಿದೆ.

ಪಾಕಿಸ್ತಾನದ ಇತಿಹಾಸದಲ್ಲಿ ಇದೇ ಮೊದಲಬಾರಿಗೆ ಖಾದ್ಯ ತೈಲ ಬೆಲೆ ಗಗನಕ್ಕೇರಿದೆ. ಖಾದ್ಯ ತೈಲ ಒಂದೇ ಸಮನೇ 208 ರೂಪಾಯಿ ಹಾಗೂ ತುಪ್ಪದ ಬೆಲೆ ಪ್ರತಿ ಕೆಜಿಗೆ 213 ರೂಪಾಯಿ ಹೆಚ್ಚಾಗಿದೆ. ಇದರಿಂದ ಖಾದ್ಯ ತೈಲ 1 ಕೆಜಿಗೆ 555 ರೂಪಾಯಿ ಆಗಿದ್ದರೆ, 1 ಕೆಜಿ ತುಪ್ಪದ ಬೆಲೆ 605 ರೂಪಾಯಿ ಆಗಿದೆ.

ಚಿಲ್ಲರೆ ಮಾರುಕಟ್ಟೆಯಲ್ಲಿ ಇದರ ಬೆಲೆ 500 ರಿಂದ 540 ರೂಪಾಯಿ ಇದೆ. ಈಗಾಗಲೇ ಪಾಕಿಸ್ತಾನ ಸರ್ಕಾರ ವಿದೇಶಿ ವಿನಿಮಯ ಸರಿದೂಗಿಸಲು ಆಮದು ಮೇಲೆ ನಿರ್ಬಂಧ ಹೇರಿದೆ. ಆದರೂ ಪರಿಸ್ಥಿತಿ ಹದಗೆಡುತ್ತಿದೆ.

ಇಂಡೋನೇಷಿಯಾದ ತಾಳೆ ಎಣ್ಣೆ ರಫ್ತು ನಿಷೇಧ ಮಾಡಿದ ಬಳಿಕ ಪಾಕಿಸ್ತಾನದಲ್ಲಿ ಖಾದ್ಯ ತೈಲ ಹಾಗೂ ತುಪ್ಪದ ಬೆಲೆ ಶೇ.300 ರಷ್ಟು ಏರಿಕೆಯಾಗಿದೆ ಎಂದು ಪಾಕಿಸ್ತಾನದ ಸುದ್ದಿ ಮಾಧ್ಯಮಗಳು ವರದಿ ಮಾಡಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ