ಭಾರತ 'ಕಾಂಗ್ರೆಸ್ ಮುಕ್ತ'ವಾಗಲು ಸಾಧ್ಯವಿಲ್ಲ

ಶನಿವಾರ, 28 ಜನವರಿ 2017 (14:57 IST)
ಕೈ 'ಮುಳುಗುತ್ತಿರುವ ಹಡಗು' ಎಂಬ ಪ್ರಧಾನಿ ಮೋದಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್, ಭಾರತ ಎಂದಿಗೂ ಕಾಂಗ್ರೆಸ್ ಮುಕ್ತವಾಗಲು ಸಾಧ್ಯವಿಲ್ಲ ಎಂದಿದೆ.
ನಿನ್ನೆ ಜಲಂಧರ್‌ನಲ್ಲಿ ಪ್ರಚಾರ ಭಾಷಣ ಮಾಡುತ್ತಿದ್ದ ಪ್ರಧಾನಿ ಮೋದಿ, ಪಂಜಾಬ್‌ನಲ್ಲಿ ಕಾಂಗ್ರೆಸ್ ನೆಲ ಕಚ್ಚಿದ್ದು ಕೊನೆಯುಸಿರೆಳೆಯುತ್ತಿದೆ. ಹಳೆಯ ಪಕ್ಷ ಮುಳುಗುವ ಹಡಗಂತಾಗಿದೆ. ಸಂಪೂರ್ಣ ಹತಾಶ ಸ್ಥಿತಿಯಲ್ಲಿರುವ 'ಕೈ' ಬೇರೆ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಕಣಕ್ಕಿಳಿಯುತ್ತಿದೆ, ಎಂದು ಟೀಕಿಸಿದ್ದರು.
 
ಪ್ರಧಾನಿ ಅವರ ಈ ಟೀಕೆಗೆ ಪ್ರತ್ಯುತ್ತರ ನೀಡಿರುವ ಕಾಂಗ್ರೆಸ್ ವಕ್ತಾರ ಕಪಿಲ್ ಸಿಬಲ್, ನಮ್ಮ ಪಕ್ಷ ಸಂವಿಧಾನದ ಮೂಲಭೂತ ಅಂಶಗಳ ಆಧಾರದ ಮೇಲೆ ಕಟ್ಟಲ್ಪಟ್ಟಿದ್ದು, ಭಾರತ ಎಂದಿಗೂ ಕೈ ಮುಕ್ತವಾಗಲು ಸಾಧ್ಯವಿಲ್ಲ, ಎಂದಿದ್ದಾರೆ. 
 
"ಕಾಂಗ್ರೆಸ್ ಸಿದ್ಧಾಂತ ಸಂವಿಧಾನದ ಮೂಲಭೂತ ತತ್ವಗಳನ್ನು ಆಧರಿಸಿದೆ. ಜಾತ್ಯತೀತ ಭಾರತಕ್ಕೆ ಸಂವಿಧಾನ ಅಡಿಪಾಯ. ನೀವು ಅದನ್ನು ನಿರ್ಲಕ್ಷಿಸಿ ಸಾಧ್ಯವಿಲ್ಲ, ಎಂದು ಕಾಂಗ್ರೆಸ್ ವಕ್ತಾರ ಕಪಿಲ್ ಸಿಬಲ್ ಹೇಳಿದ್ದಾರೆ.
 
ಕಾಂಗ್ರೆಸ್‌ಗೆ ಯಾವುದೇ "ತತ್ವಗಳಿಲ್ಲ" ಎಂದಿರುವ ಮೋದಿ ಅವರ ಈ ಹೇಳಿಕೆಗೆ ಪ್ರತ್ಯುತ್ತರ ನೀಡಿರುವ ಅವರು, ಕಾಂಗ್ರೆಸ್ ಮುಕ್ತ ಭಾರತ ಎಂಬುದು ಒಡೆದು ಆಳುವ ನೀತಿಯೆಡೆಗಿನ ಮೊದಲ ಹೆಜ್ಜೆ ಎಂದಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ