ನವದೆಹಲಿ: ಪಾಕಿಸ್ತಾನವನ್ನು ಭಾರತ ಗೌರವದಿಂದ ನೋಡಿಕೊಳ್ಳಬೇಕು. ಇಲ್ಲದೇ ಹೋದರೆ ಆ ದೇಶ ಅಣ್ವಸ್ತ್ರ ದಾಳಿ ಮಾಡಬಹುದು ಎಂದು ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ಮಣಿಶಂಕರ್ ಅಯ್ಯರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಪಾಕಿಸ್ತಾನವನ್ನು ಭಾರತ ಗೌರವಿಸಬೇಕೇ ಹೊರತು ಸೇನಾಬಲವನ್ನು ಹೆಚ್ಚಿಸಿಕೊಳ್ಳಬಾರದು. ಪಾಕಿಸ್ತಾನದ ಬಳಿ ಅಣ್ವಸ್ತ್ರಗಳಿವೆ. ಒಂದು ವೇಳೆ ನಾವು ಆ ದೇಶಕ್ಕೆ ಗೌರವ ಕೊಡದೇ ಇದ್ದರೆ ಅದು ನಮ್ಮ ಮೇಲೆ ಅಣ್ವಸ್ತ್ರ ದಾಳಿ ಮಾಡಬಹುದು ಎಂದು ಮಣಿಶಂಕರ್ ನೀಡಿರುವ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ.
ಭಯೋತ್ಪಾದನೆ ಮತ್ತು ಮಾತುಕತೆ ಎರಡೂ ಒಟ್ಟಿಗೆ ನಡೆಯಲು ಸಾಧ‍್ಯವಿಲ್ಲ ಎಂದು ಬಿಜೆಪಿ ಹೇಳುತ್ತದೆ. ಆದರೆ ಭಯೋತ್ಪಾದನೆ ಕೊನೆಗೊಳ್ಳಬೇಕಾದರೆ ಮಾತುಕತೆಯೊಂದೇ ಮಾರ್ಗ. ಭಾರತ ಸರ್ಕಾರ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸಬೇಕು. ಆದರೆ ನೆರೆಯ ದೇಶವನ್ನು ಗೌರವಿಸದೇ ಇದ್ದರೆ ಭಾರೀ ಬೆಲೆ ತೆರಬೇಕಾದೀತು ಎಂದಿದ್ದಾರೆ.
ನಾವು ಅವರನ್ನು ಗೌರವಿಸಿದರೆ ಅವರು ಶಾಂತಿಯಿಂದ ಇರುತ್ತಾರೆ. ಧಿಕ್ಕರಿಸಿದರೆ ನಮ್ಮ ಮೇಲೆ ಅಣ್ವಸ್ತ್ರ ದಾಳಿ ಮಾಡುತ್ತಾರೆ. ಧ‍್ವೇಷ ಸಾಧಿಸಿ, ಬಂಧೂಕು ತೋರಿಸಿ ಎಲ್ಲವನ್ನೂ ಸರಿಪಡಿಸಲು ಸಾಧ‍್ಯವಿಲ್ಲ ಎಂದು ಮಣಿಶಂಕರ್ ಹೇಳಿದ್ದಾರೆ. ಕಾಂಗ್ರೆಸ್ ನಾಯಕನ ಈ ಹೇಳಿಕೆಗೆ ಭಾರೀ ಟೀಕೆ ವ್ಯಕ್ತವಾಗಿದೆ.