ಉಕ್ರೇನ್-ರಷ್ಯಾ ಬಿಕ್ಕಟ್ಟಿನಲ್ಲಿ ಭಾರತ ಶಾಂತಿ ಪರ

ಗುರುವಾರ, 7 ಏಪ್ರಿಲ್ 2022 (12:57 IST)
ಉಕ್ರೇನ್ ಹಾಗೂ ರಷ್ಯಾದ ನಡುವಿನ ಬಿಕ್ಕಟ್ಟಿನಲ್ಲಿ ಭಾರತವು ಶಾಂತಿಯ ಪರವಾಗಿದೆ ಹಾಗೂ ಭೀಕರ ಯುದ್ಧವನ್ನು ಕೂಡಲೇ ನಿಲ್ಲಿಸಲು ಕರೆ ನೀಡುತ್ತದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.

ಲೋಕಸಭೆಯಲ್ಲಿ ಉಕ್ರೇನಿನ ಬಿಕ್ಕಟ್ಟಿನ ವಿಚಾರವಾಗಿ ಮಾತನಾಡಿದ ಅವರು, ‘ಭಾರತವು ಆಧ್ಯಕ್ಷೀಯ ಮಟ್ಟದಲ್ಲಿ ಉಕ್ರೇನ್ ಹಾಗೂ ರಷ್ಯಾ ನಡುವೆ ಶಾಂತಿ ಮಾತುಕತೆ ಬಯಸುತ್ತದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರೇ ಉಭಯ ದೇಶಗಳ ಅಧ್ಯಕ್ಷರೊಂದಿಗೆ ಮಾತುಕತೆ ನಡೆಸಿದ್ದಾರೆ.

ರಷ್ಯಾದ ವಿದೇಶಾಂಗ ಸಚಿವ ಸರ್ಗೇಯ್ ಲಾವ್ರೊವ್ ದೆಹಲಿಗೆ ಭೇಟಿ ನೀಡಿದಾಗಲೂ ಈ ವಿಷಯವನ್ನು ಚರ್ಚಿಸಲಾಗಿದೆ. ಯುದ್ಧ ಕೊನೆಗೊಳಿಸಿ ಶಾಂತಿ ಮಾತುಕತೆ ಆರಂಭಿಸುವ ನಿಟ್ಟಿನಲ್ಲಿ ಯಾವುದೇ ರೀತಿಯ ಸಹಾಯ ಒದಗಿಸಲು ಭಾರತ ಸಿದ್ಧವಾಗಿದೆ’ ಎಂದರು.

ಇದೇ ವೇಳೆ ಉಕ್ರೇನಿನಲ್ಲಿ ನಡೆದ ಸಾಮೂಹಿಕ ಹತ್ಯಾಕಾಂಡವನ್ನು ಭಾರತವು ವಿರೋಧಿಸುತ್ತದೆ. ಅಲ್ಲದೇ ಈ ಕುರಿತು ಸ್ವತಂತ್ಯ ತನಿಖೆಗೆ ಆಗ್ರಹಿಸುತ್ತದೆ ಎಂದು ಹೇಳಿದರು.

ಉಕ್ರೇನಿನಲ್ಲಿ ಸಿಲುಕಿದ ಭಾರತೀಯರನ್ನು ಸುರಕ್ಷಿತವಾಗಿ ದೇಶಕ್ಕೆ ಮರಳಿ ತರುವ ಆಪರೇಶನ್ ಗಂಗಾ ಕಾರ್ಯಾಚರಣೆಯ ಬಗ್ಗೆ ಮಾತನಾಡಿದ ಜೈಶಂಕರ್, ಪ್ರಧಾನಿ ನರೇಂದ್ರ ಮೋದಿಯವರ ಪ್ರಯತ್ನದಿಂದಲೇ ಆಪರೇಶನ್ ಗಂಗಾ ಸಫಲವಾಯಿತು ಎಂದು ಶ್ಲಾಘಿಸಿದರು.

‘ಮೋದಿ ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹಾಗೂ ಉಕ್ರೇನಿನ ಅಧ್ಯಕ್ಷ ಜೆಲೆನ್ಸ್ಕಿ ಅವರೊಂದಿಗೆ ಮಾತುಕತೆ ನಡೆಸಿದರು. ಕದನ ವಿರಾಮದ ಸತತ ಉಲ್ಲಂಘನೆ ನಡುವೆಯೂ ಸಂಘರ್ಷ ವಲಯವಾದ ಸುಮಿ ಹಾಗೂ ಖಾರ್ಕೀವ್ನಲ್ಲಿ ಸಿಲುಕಿರುವ ಭಾರತೀಯರಿಗೆ ರಷ್ಯಾದ ಯೋಧರೇ ಸುರಕ್ಷಿತವಾಗಿ ಸ್ಥಳಾಂತರವಾಗಲು ನೆರವು ನೀಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ