ಕಾಶ್ಮೀರ ಸಮಸ್ಯೆ: ಮೋದಿಗೆ ಭಾರತೀಯ ಮೂಲದ ಅಮೇರಿಕನ್ ಬಾಲಕಿ ಪತ್ರ

ಮಂಗಳವಾರ, 2 ಆಗಸ್ಟ್ 2016 (17:31 IST)
ಪ್ರತಿಭಟಿಸುತ್ತಿರುವ ಕಾಶ್ಮೀರಿಗಳ ಧ್ವನಿಯನ್ನು ಕೇಳಿ ಎಂದು ಕಾಶ್ಮೀರಿ ಮೂಲದ 17 ವರ್ಷದ ಅಮೇರಿಕನ್ ಬಾಲಕಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾಳೆ.

ಜಾರ್ಜಿಯಾದಲ್ಲಿ ವಾಸವಾಗಿರುವ ಫಾತಿಮಾ ಶಾಹೀನ್ ಪತ್ರದಲ್ಲಿ ಹೀಗೆ ಬರೆದಿದ್ದಾಳೆ:

ಪ್ರೀತಿಯ ಪ್ರಧಾನಿಯವರೇ,  ಕಾಶ್ಮೀರಿ ಜನರ ಬಗ್ಗೆ ಕಾಳಜಿ ಹೊಂದಿದ್ದರೆ, ನಾವು ಅಲ್ಲಿ ಎಲ್ಲ ರೀತಿಯ ಸಂಪರ್ಕ ವ್ಯವಸ್ಥೆಯನ್ನು ತಡೆದು ಜನರನ್ನು ಸ್ವಾತಂತ್ರ್ಯದಿಂದ ವಂಚಿತರನ್ನಾಗಿಸುವ ದಾರಿಯನ್ನು ತುಳಿಯುತ್ತಿರಲಿಲ್ಲ. ಜನರ ಮಾತುಗಳನ್ನು ಕೇಳಲು ಎಲ್ಲ ರೀತಿಯ ಸಂಪರ್ಕ ಮಾಧ್ಯಮಗಳನ್ನು ನಾವು ತೆರೆದಿಡಬೇಕಾಗುತ್ತದೆ. ಅದನ್ನೇ ಅಲ್ಲವೇ ಅವರು ಕೇಳುತ್ತಿರುವುದು?

ಪ್ರತಿಯೊಬ್ಬರು ಕಾಶ್ಮೀರವನ್ನು ಬಯಸುತ್ತಾರೆ. ಆದರೆ ಇಲ್ಲಿಯ ಜನರ ಬಗ್ಗೆ ಯಾರೂ ಕಾಳಜಿ ತೋರುವುದಿಲ್ಲ. ನಾವು ಅವರನ್ನು ಅರ್ಥ ಮಾಡಿಕೊಂಡಿದ್ದರೆ,  ಬುರ್ಹಾನ್ ವಾನಿ ಒಬ್ಬ ಉಗ್ರನೋ ಅಥವಾ ಹುತಾತ್ಮನೋ ಎಂಬ ಕಾಶ್ಮೀರಿಗಳ ಅಭಿಪ್ರಾಯಕ್ಕೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಒಬ್ಬ ವಿದ್ಯಾರ್ಥಿ ಪೆನ್ ಹಿಡಿಯುವ ಬದಲು ಗನ್‌ನ್ನು ಏಕೆ ಹಿಡಿದ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕಿದೆ.

ಜುಲೈ 10 ರಂದು ಸಂಬಂಧಿಕರನ್ನು ಭೇಟಿಯಾಗಲು ಕಾಶ್ಮೀರಕ್ಕೆ ಬಂದಾಗ ನಾನು ಕಂಡ ಸನ್ನಿವೇಶ ನಾನು ಈ ಹಿಂದೆಂದೂ ಕೇಳರಿಯದಾಗಿತ್ತು.

ಪ್ರಧಾನಿಯವರೇ, ನಾನು ದಿನನಿತ್ಯ ಸುದ್ದಿಯನ್ನು ನೋಡುತ್ತೇನೆ. ಅದರಲ್ಲಿ ಫ್ರಾನ್ಸ್ ಅಥವಾ ನೀಸ್‌ನಲ್ಲಿ ನಡೆದ ದಾಳಿಗಳ ಬಗ್ಗೆ ಹೇಳಲಾಗುತ್ತದೆ, ದಕ್ಷಿಣ ಭಾರತದಲ್ಲಿ ಮುಂಗಾರು ಮಳೆಯಾದ ಸುದ್ದಿಯನ್ನು ಸಹ ಬಿತ್ತರಿಸಲಾಗುತ್ತದೆ. ಆದರ ಕಾಶ್ಮೀರದ ಸುದ್ದಿ ಎಲ್ಲಿ? ನನ್ನ ತವರಿನಲ್ಲಿ ಇಷ್ಟು ದೀರ್ಘ ಅವಧಿಯಿಂದ ಏನಾಗುತ್ತಿದೆ ಎಂಬುದು ನನಗೆ ತಿಳಿದಿಲ್ಲ ಸರ್. ಯಾರಿಗೂ ಕಾಶ್ಮೀರದ ಜನರ ಚಿಂತೆ ಇಲ್ಲ. ಎಲ್ಲರೂ ರಾಜ್ಯದ ನೆಲವನ್ನು ಬಯಸುತ್ತಾರೆ.

ಎಂದು ತನ್ನ ತವರು ಜನರ ಸ್ಥಿತಿಯ ಬಗ್ಗೆ ಕಳವಳ ವ್ಯಕ್ತ ಪಡಿಸಿ ಬಹಿರಂಗ ಪತ್ರ ಬರೆದಿದ್ದಾಳೆ ಆಕೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ