ನವದೆಹಲಿ : ವಂದೇ ಭಾರತ್ ರೈಲುಗಳ ಮೇಲೆ ಕಲ್ಲುತೂರಾಟದಂತಹ ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದಂತೆ ದಕ್ಷಿಣ ಮಧ್ಯ ರೈಲ್ವೆ ಮಂಗಳವಾರ ಸಾರ್ವಜನಿಕರಲ್ಲಿ ಮನವಿ ಮಾಡಿದೆ.
ಜನರು ಇಂತಹ ಕೃತ್ಯದಲ್ಲಿ ತೊಡಗೊದ್ದೇ ಆದಲ್ಲಿ ಅಂತಹ ಅಪರಾಧಿಗಳಿಗೆ 5 ವರ್ಷಗಳ ವರೆಗೆ ಜೈಲು ಶಿಕ್ಷೆಯನ್ನು ವಿಸ್ತರಿಸುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿದೆ. ಇತ್ತೀಚೆಗೆ ತೆಲಂಗಾಣದ ವಿವಿಧೆಡೆ ವಂದೇ ಭಾರತ್ ರೈಲುಗಳ ಮೇಲೆ ಕಲ್ಲು ತೂರಾಟದ ಹಲವಾರು ನಿದರ್ಶನಗಳು ವರದಿಯಾದ ಬಳಿಕ ಈ ಎಚ್ಚರಿಕೆಯನ್ನು ನೀಡಲಾಗಿದೆ. ವಂದೇ ಭಾರತ್ ರೈಲುಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿರುವ 9 ಘಟನೆಗಳು ಜನವರಿಯಿಂದ ವರದಿಯಾಗಿದೆ.
2019 ರ ಫೆಬ್ರವರಿಯಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ ಪ್ರಾರಂಭವಾದಾಗಿನಿಂದ ರೈಲುಗಳ ಮೇಲೆ ತೆಲಂಗಾಣ, ಬಿಹಾರ, ಉತ್ತರ ಪ್ರದೇಶ, ಛತ್ತೀಸ್ಗಢ ಹಾಗೂ ಪಶ್ಚಿಮ ಬಂಗಾಳದಲ್ಲಿ ದಾಳಿ ಮಾಡಲಾಗಿದೆ. ಈ ಬಗ್ಗೆ ಹಲವಾರು ಪ್ರಕರಣಗಳನ್ನು ದಾಖಲಿಸಲಾಗಿದ್ದು, ಇದುವರೆಗೆ 39 ಅಪರಾಧಿಗಳನ್ನು ರೈಲ್ವೇ ರಕ್ಷಣಾ ಪಡೆ ಬಂಧಿಸಿದೆ.