ಜಲ್ಲಿಕಟ್ಟು ತೀರ್ಪು ಮುಂದೂಡಲು ಸುಪ್ರೀಂ ಒಪ್ಪಿಗೆ; ಸುಗ್ರಿವಾಜ್ಞೆ ಹೊರಡಿಸಲು ಕೇಂದ್ರ ಚಿಂತನೆ

ಶುಕ್ರವಾರ, 20 ಜನವರಿ 2017 (11:43 IST)
ಜಲ್ಲಿಕಟ್ಟು ಕುರಿತಂತೆ ಅಂತಿಮ ತೀರ್ಪನ್ನು ಮುಂದೂಡಲು ಸುಪ್ರೀಂಕೋರ್ಟ್ ಒಪ್ಪಿಕೊಂಡಿದೆ. 

ಕೇಂದ್ರ ಸರ್ಕಾರದ ಮನವಿಯನ್ನು ಪುರಸ್ಕರಿಸಿರುವ ಸುಪ್ರೀಂ ಅಂತಿಮ ತೀರ್ಪನ್ನು ಒಂದು ವಾರಗಳ ಕಾಲ ಮುಂದೂಡಿದೆ.
 
ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ಇಂದು ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರನ್ನೊಳಗೊಂಡ ಸುಪ್ರೀಂ ಪೀಠದ ಬಳಿ ಈ ಮನವಿಯನ್ನು ಇಟ್ಟಿದ್ದರು. 
 
ಈ ಹಿಂದೆ ಕೇಂದ್ರ ಈ ಎಂದೂ ಈ ರೀತಿಯ ಮನವಿಯನ್ನು ಸುಪ್ರೀಂ ಮುಂದಿಟ್ಟಿರಲಿಲ್ಲ. ಆದರೆ ಜಲ್ಲಿಕಟ್ಟು ನಿಷೇಧಕ್ಕೆ ಆಕ್ರೋಶಗೊಂಡಿರುವ ತಮಿಳುನಾಡಿಗರು ತಮ್ಮ ಸಾಂಪ್ರದಾಯಿಕ ಕ್ರೀಡೆಗೆ ತಡೆಯಾಗಲು ಕೇಂದ್ರವೇ ಕಾರಣ ಎಂದು ಕಿಡಿಕಾರುತ್ತಿದ್ದಾರೆ. ಅವರ ಆಕ್ರೋಶವೆಲ್ಲ ಕೇಂದ್ರದ ವಿರುದ್ಧವಿದೆ ಹೊರತು ರಾಜ್ಯ ಸರ್ಕಾರದ ವಿರುದ್ಧವಲ್ಲ. ಹೀಗಾಗಿ ಅವರನ್ನು  ತಣ್ಣಗಾಗಿಸಲು ಸುಗ್ರಿವಾಜ್ಞೆಯನ್ನು ಹೊರಡಿಸುವುದೊಂದೇ ಮಾರ್ಗ ಎಂಬುದನ್ನು ಅರಿತುಕೊಂಡಿರುವ ಕೇಂದ್ರ ಇದೇ ಕಾರಣಕ್ಕೆ ತೀರ್ಪನ್ನು ಒಂದು ವಾರ ಮುಂದೂಡಲು ಮನವಿ ಮಾಡಿಕೊಂಡಿದೆ ಎಂದು ಹೇಳಲಾಗುತ್ತಿದೆ. 
 
ಪೊಂಗಲ್ ಒಳಗೆ ತೀರ್ಪು ನೀಡಿ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಕೀಲರು ಸುಪ್ರೀಂ ವಕೀಲರ ಬಳಿ ಈ ಹಿಂದೆ ಮನವಿ ಮಾಡಿಕೊಂಡಿದ್ದರು. ಆದರೆ ಮೊದಲೇ ಆದೇಶ ನೀಡಿ ಎಂದು ನಮ್ಮನ್ನು ಕೋರಿರುವುದು ಅಸಮಂಜಸ ಎಂದಿದ್ದ ಕೋರ್ಟ್ ಮನವಿಯನ್ನು ತಳ್ಳಿ ಹಾಕಿತ್ತು. ಮತ್ತೀಗ ಕೇಂದ್ರದ ಮನವಿಯನ್ನು ಸ್ವೀಕರಿಸಿ ತೀರ್ಪು ಮುಂದೂಡಲು ಒಪ್ಪಿಕೊಂಡಿದೆ. 
 
ತೀರ್ಪು ಮುಂದೂಡಿದರೆ ಕೇಂದ್ರ ಸುಗ್ರಿವಾಜ್ಞೆ ಹೊರಡಿಸಿ ಜಲ್ಲಿಕಟ್ಟು ನಡೆಸಲು ಅನುವು ಮಾಡಿಕೊಡಬಹುದು. ಸುಪ್ರೀಂ ಇನ್ನು ತೀರ್ಪು ಕೂಡ ನೀಡಿಲ್ಲವಾದ್ದರಿಂದ ಈಗಲೇ ಸುಗ್ರಿವಾಜ್ಞೆ ಹೊರಡಿಸುವುದರಿಂದ ನ್ಯಾಯಾಂಗ ನಿಂದನೆ ಮಾಡಿದಂತಾಗುವುದಿಲ್ಲ. 
 
ಹೀಗಾಗಿ ಸುಗ್ರಿವಾಜ್ಞೆ ಹೊರಡಿಸುವುದರ ಕುರಿತಂತೆ ಕೇಂದ್ರ ತಮಿಳುನಾಡು ಸರ್ಕಾರದ ಜತೆ ಮಾತುಕತೆ ನಡೆಸುತ್ತಿದೆ. 
 
ಕೇಂದ್ರ ನಿನ್ನೆ ಕೈ ಚೆಲ್ಲಿದ್ದ ಹಿನ್ನೆಲೆಯಲ್ಲಿ ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ಕಾನೂನು ಸಲಹೆಯನ್ನು ಪಡೆದಿದ್ದ ತಮಿಳುನಾಡು ಸರ್ಕಾರ, ತಾನೇ ಸುಗ್ರಿವಾಜ್ಞೆ ಹೊರಡಿಸುವ ಚಿಂತನೆ ನಡೆಸಿತ್ತು ಮತ್ತು ಇದರ ಕರಡನ್ನು ಕೇಂದ್ರಕ್ಕೆ ಕಳುಹಿಸಿತ್ತು. ಇದರ ಮಧ್ಯೆ ಕೇಂದ್ರ ಕೂಡ ಸುಗ್ರಿವಾಜ್ಞೆ ಹೊರಡಿಸಲು ಮುಂದಾಗಿದೆ. 
 

ವೆಬ್ದುನಿಯಾವನ್ನು ಓದಿ